ಪ್ರವಾಸದ ವೇಳೆ ನಡೆದ ದುರ್ಘಟನೆ; ಸೋಮವಾರಪೇಟೆ ಹೋಂಸ್ಟೇಯಲ್ಲಿ ಯುವತಿಯ ಜೀವ ಬಲಿ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರವಾಸಕ್ಕೆ ಬಂದಿದ್ದ ಮೈಸೂರಿನ ಯುವತಿಯೊಬ್ಬರು ಹೋಂಸ್ಟೇಯ ಬಾತ್‌ರೂಮ್‌ನಲ್ಲಿ ಸಂಭವಿಸಿದ ಗ್ಯಾಸ್ ಸೋರಿಕೆ ದುರಂತದಲ್ಲಿ ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆಯ ನಿವಾಸಿಗಳಾದ ಜಗನ್ನಾಥ್ ಹಾಗೂ ರೇಣುಕಾ ದಂಪತಿಯ ಪುತ್ರಿ ವಿನೂತ (27) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ವಿನೂತ ಅವರು ಕೊಡಗು ಪ್ರವಾಸದ ನಿಮಿತ್ತ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ಹೋಂಸ್ಟೇ ಒಂದರಲ್ಲಿ ತಂಗಿದ್ದರು. ಭಾನುವಾರ ಬೆಳಗ್ಗೆ ಸ್ನಾನಕ್ಕಾಗಿ ಬಾತ್‌ರೂಮ್‌ಗೆ ತೆರಳಿದ ವೇಳೆ ಅಳವಡಿಸಲಾಗಿದ್ದ ಗ್ಯಾಸ್ ಗೀಸರ್‌ನಿಂದ ಸೋರಿಕೆಯಾದ ಅನಿಲದ ಪರಿಣಾಮ ಅವರು ಅಸ್ವಸ್ಥಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಓದಿ : LPG ಸಿಲಿಂಡರ್ ದರ ಏರಿಕೆ; ಕರ್ನಾಟಕದಲ್ಲೂ ಇಂದಿನಿಂದ ಹೊಸ ಬೆಲೆ ಜಾರಿ
ಪ್ರಾಥಮಿಕ ಮಾಹಿತಿಯಂತೆ, ಘಟನೆ ನಡೆದ ಬಾತ್‌ರೂಮ್‌ನಲ್ಲಿ ಸಮರ್ಪಕ ಗಾಳಿಯಾಡುವ ವ್ಯವಸ್ಥೆ ಇರಲಿಲ್ಲ ಎನ್ನಲಾಗಿದ್ದು, ಕಿಟಕಿ ಕೂಡ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ಗ್ಯಾಸ್ ಸಂಗ್ರಹಗೊಂಡು ದುರಂತ ಸಂಭವಿಸಿರುವ ಸಾಧ್ಯತೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಘಟನೆಯ ನಂತರ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿನ ನಿಖರ ಕಾರಣ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಈ ಘಟನೆ ಪ್ರವಾಸಿ ತಾಣಗಳಲ್ಲಿನ ಹೋಂಸ್ಟೇ ಹಾಗೂ ವಸತಿ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳ ಅಗತ್ಯತೆಯನ್ನು ಮತ್ತೊಮ್ಮೆ ನೆನಪಿಸುವಂತಾಗಿದೆ.
ಮತ್ತಷ್ಟು ಓದಿ :
LPG ಸಂಪರ್ಕಕ್ಕೆ ಹೊಸ ಮಾರ್ಗಸೂಚಿ: PNG ಹೊಂದಿರುವ ಮನೆಗಳಿಗೆ ‘ಒಂದು ಸಂಪರ್ಕ’ ನೀತಿ ಅನ್ವಯ











