ಜೂನ್ 14ರವರೆಗೆ ಮುಂಗಾರು ಚುರುಕು, ಕರಾವಳಿ ಭಾಗಕ್ಕೆ ಆರೆಂಜ್ ಅಲರ್ಟ್ ಘೋಷಣೆ
ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆಗಳು ಮತ್ತಷ್ಟು ಬಲಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಭಾರಿ ಹಾಗೂ ಕೆಲವೆಡೆ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದ್ದು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಹವಾಮಾನ ಇಲಾಖೆಯ ಪ್ರಕಾರ ಜೂನ್ 14ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯ ಜೊತೆಗೆ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಂಭವವೂ ಇದೆ.
ಕರಾವಳಿಯಲ್ಲಿ ಮಳೆಯ ಅಬ್ಬರ, ಜೂನ್ 13ಕ್ಕೆ ಆರೆಂಜ್ ಅಲರ್ಟ್
ಆರಂಭಿಕ ಮುನ್ಸೂಚನೆಯ ಪ್ರಕಾರ ಜೂನ್ 12ರಂದು ಕರಾವಳಿ ಜಿಲ್ಲೆಗಳಿಗೆ ಅತಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿತ್ತು. ಆದರೆ ಇತ್ತೀಚಿನ ಹವಾಮಾನ ವಿಶ್ಲೇಷಣೆಯಂತೆ ಈ ಅಲರ್ಟ್ ಅನ್ನು ಜೂನ್ 13ಕ್ಕೆ ಮುಂದೂಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಆ ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದಲ್ಲದೆ ಕರಾವಳಿ ಜಿಲ್ಲೆಗಳಲ್ಲಿ ಜೂನ್ 16ರವರೆಗೆ ಮಳೆಯ ಚಟುವಟಿಕೆ ಮುಂದುವರಿಯುವ ನಿರೀಕ್ಷೆಯಿದ್ದು, ಹಲವು ದಿನಗಳ ಕಾಲ ಯೆಲ್ಲೋ ಅಲರ್ಟ್ ಜಾರಿಯಲ್ಲಿರಲಿದೆ.
ತಕ್ಷಣದ ಮಳೆ ಎಚ್ಚರಿಕೆ
ಹವಾಮಾನ ಇಲಾಖೆ ಹೊರಡಿಸಿರುವ ತಕ್ಷಣದ ಮುನ್ಸೂಚನೆಯ ಪ್ರಕಾರ ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು ಮತ್ತು ಮೈಸೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗುಡುಗು, ಬಿರುಗಾಳಿ ಹಾಗೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ಮುನ್ಸೂಚನೆ ಗುರುವಾರ ಸಂಜೆ ಹೊರಡಿಸಲಾಗಿದ್ದು, ಮುಂದಿನ ಕೆಲವೇ ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆಯನ್ನು ಇಲಾಖೆ ಸೂಚಿಸಿದೆ.
ಜೂನ್ 12ರ ಹವಾಮಾನ ಮುನ್ಸೂಚನೆ
ಶುಕ್ರವಾರ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದೇ ವೇಳೆ ಬೀದರ್, ಕಲಬುರಗಿ, ಯಾದಗಿರಿ, ಧಾರವಾಡ, ಗದಗ, ರಾಯಚೂರು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೂ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ.
ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಹಾವೇರಿ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಕಳೆದ 24 ಗಂಟೆಗಳ ಮಳೆ ದಾಖಲೆ
ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದೆ. ಕಾರ್ಕಳ ಹಾಗೂ ಮಾಳ ಪ್ರದೇಶಗಳಲ್ಲಿ ತಲಾ 71.5 ಮಿಲಿಮೀಟರ್ ಮಳೆ ದಾಖಲಾಗಿದೆ.
ಮಡಿಕೇರಿಯಲ್ಲಿ 58 ಮಿಲಿಮೀಟರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪಡುಮಾರ್ನಾಡು ಪ್ರದೇಶದಲ್ಲಿ 57 ಮಿಲಿಮೀಟರ್ ಮಳೆಯಾಗಿದೆ. ಜಿಲ್ಲಾವಾರು ಪರಿಶೀಲಿಸಿದರೆ ಕರಾವಳಿ ಭಾಗಗಳ ಜೊತೆಗೆ ತುಮಕೂರು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಉತ್ತಮ ಪ್ರಮಾಣದ ಮಳೆ ದಾಖಲಾಗಿದೆ.
ಜೂನ್ ಮೂರನೇ ವಾರದಿಂದ ಮಳೆ ಪ್ರಮಾಣ ಇಳಿಕೆ ಸಾಧ್ಯತೆ
ಹವಾಮಾನ ತಜ್ಞರ ಅಂದಾಜಿನ ಪ್ರಕಾರ ಜೂನ್ 14ರ ನಂತರ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಜೂನ್ ಮೂರನೇ ವಾರದಲ್ಲಿ ಮಳೆ ಪ್ರಮಾಣ ಕ್ಷೀಣಿಸುವ ಲಕ್ಷಣಗಳು ಕಂಡುಬರುತ್ತಿವೆ.
ಮತ್ತಷ್ಟು ಓದಿ :
ಕೊಡಗಿನಲ್ಲಿ ಭಾರಿ ವಾಹನಗಳಿಗೆ ತಾತ್ಕಾಲಿಕ ನಿರ್ಬಂಧ : ಜುಲೈ 9ರವರೆಗೆ ಜಿಲ್ಲಾಡಳಿತ ಆದೇಶ











