ಮಂಗಳೂರು: ವಿದೇಶದಿಂದ ಚಿನ್ನ ಮತ್ತು ವಿದೇಶಿ ಕರೆನ್ಸಿ ಕಳುಹಿಸುವುದಾಗಿ ನಂಬಿಕೆ ಮೂಡಿಸಿ ಮಹಿಳೆಯೊಬ್ಬರಿಂದ ₹28.95 ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
54 ವರ್ಷದ ಮಹಿಳೆಗೆ 2025ರ ಮೇ ತಿಂಗಳಲ್ಲಿ ಫೇಸ್‌ಬುಕ್ ಮೂಲಕ ಡಾ. ಕ್ಲಿಂಟನ್ ಸ್ಮಿತ್ ಎಂಬ ಹೆಸರಿನ ವ್ಯಕ್ತಿಯ ಪರಿಚಯವಾಗಿತ್ತು. ಬಳಿಕ ಆತ ವಾಟ್ಸ್‌ಆ್ಯಪ್ ಮೂಲಕ ಸಂಪರ್ಕ ಮುಂದುವರಿಸಿ, ತಾನು ನೆದರ್‌ಲ್ಯಾಂಡ್ಸ್‌ನಲ್ಲಿ ವಾಸವಿದ್ದು ಹೃದಯ ತಜ್ಞನಾಗಿ ಕೆಲಸ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾನೆ.
ಸಂದೇಶಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದ ಆತ, ಕೆಲವು ದಿನಗಳ ಬಳಿಕ ಮಹಿಳೆಗೆ ಚಿನ್ನ ಹಾಗೂ ಅಮೆರಿಕನ್ ಡಾಲರ್‌ಗಳನ್ನು ಕಳುಹಿಸುವುದಾಗಿ ತಿಳಿಸಿದ್ದಾನೆ. ನಂತರ ಪಾರ್ಸೆಲ್ ಅನ್ನು ವಿಮಾನದ ಮೂಲಕ ಭಾರತಕ್ಕೆ ಕಳುಹಿಸಿದ್ದು, ಅದು ನವದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ ಎಂದು ಹೇಳಿದ್ದಾನೆ.
ಮುಂದೆ, ಪಾರ್ಸೆಲ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ ತಿಳಿಸಿ, ಅದನ್ನು ಬಿಡುಗಡೆಗೊಳಿಸಲು ವಿವಿಧ ಶುಲ್ಕಗಳನ್ನು ಪಾವತಿಸಬೇಕೆಂದು ಮಹಿಳೆಗೆ ಮಾಹಿತಿ ನೀಡಲಾಗಿದೆ. ಈ ಹಂತದಲ್ಲಿ ತಮ್ಮನ್ನು ಕಸ್ಟಮ್ಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಕೆಲ ಅಪರಿಚಿತರು ದೂರವಾಣಿ ಮೂಲಕ ಸಂಪರ್ಕಿಸಿ, ಕಸ್ಟಮ್ಸ್ ಸುಂಕ ಹಾಗೂ ಸಂಗ್ರಹಣಾ ಶುಲ್ಕ ಪಾವತಿಸುವಂತೆ ಸೂಚಿಸಿದ್ದಾರೆ.
ಅವರ ಸೂಚನೆಯಂತೆ ಮಹಿಳೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾಯಿಸಿದ್ದು, ಒಟ್ಟು ₹28.95 ಲಕ್ಷ ಪಾವತಿಸಿದ್ದಾರೆ. ಬಳಿಕ ಪಾರ್ಸೆಲ್ ಅನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗುವುದು ಎಂದು ತಿಳಿಸಲಾಗಿತ್ತು.
ಪಾರ್ಸೆಲ್ ಬಗ್ಗೆ ಖಚಿತಪಡಿಸಿಕೊಳ್ಳಲು ಮಹಿಳೆ ವಿಮಾನ ನಿಲ್ದಾಣದಲ್ಲಿ ವಿಚಾರಿಸಿದಾಗ, ಅಂತಹ ಯಾವುದೇ ಪಾರ್ಸೆಲ್ ಬಂದಿಲ್ಲ ಎಂಬ ಮಾಹಿತಿ ದೊರೆತಿದೆ. ನಂತರ ಸಂಬಂಧಪಟ್ಟ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಪ್ರಕಾರ, 2025ರ ಜೂನ್ 6ರಿಂದ 2026ರ ಮೇ 8ರವರೆಗೆ ವಿವಿಧ ಹಂತಗಳಲ್ಲಿ ಹಣ ವರ್ಗಾವಣೆಯಾಗಿದ್ದು, ಈ ಅವಧಿಯಲ್ಲಿ ವಂಚಕರು ಒಟ್ಟು ₹28.95 ಲಕ್ಷ ಪಡೆದುಕೊಂಡಿದ್ದಾರೆ.
ವಿದೇಶದಿಂದ ಅಮೂಲ್ಯ ವಸ್ತುಗಳು ಮತ್ತು ಹಣ ಕಳುಹಿಸುವುದಾಗಿ ಹೇಳಿ ಸಾಮಾಜಿಕ ಜಾಲತಾಣಗಳ ಮೂಲಕ ನಂಬಿಕೆ ಗಳಿಸಿ ವಂಚಿಸಿರುವ ಈ ಪ್ರಕರಣದ ಕುರಿತು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ತನ್ನ ದೂರಿನಲ್ಲಿ ಮನವಿ ಮಾಡಿದ್ದಾರೆ.
ಮತ್ತಷ್ಟು ಓದಿ :
ಫ್ಲ್ಯಾಟ್, ಕಾರು, ಚಿನ್ನದ ಆಮಿಷ ; ಲಕ್ಕಿ ಸ್ಕೀಮ್ ಹೆಸರಿನಲ್ಲಿ ಕೋಟ್ಯಂತರ ವಂಚನೆ!
11 ಕೋಟಿ ರೂ. ಹೈಡ್ರೋಪೋನಿಕ್ಸ್ ಗಾಂಜಾ ಜಪ್ತಿ: ‘ಮಿಸೆಸ್ ಕೇರಳ’ ಮಾಜಿ ಸ್ಪರ್ಧಿ ಬಂಧನ














5 thoughts on “ಫೇಸ್‌ಬುಕ್ ಪರಿಚಯದ ಬಲೆಗೆ ಬಿದ್ದ ಮಹಿಳೆ, ಚಿನ್ನದ ಪಾರ್ಸೆಲ್ ಹೆಸರಿನಲ್ಲಿ ₹28.95 ಲಕ್ಷ ವಂಚನೆ”