ಪ್ರಶ್ನೆಪತ್ರಿಕೆ ಸೋರಿಕೆ, ನಕಲಿ ಸಂದೇಶಗಳು ಮತ್ತು ವದಂತಿಗಳಿಗೆ ಕಡಿವಾಣ; ಪರೀಕ್ಷಾ ಭದ್ರತೆಗಾಗಿ ಅಪರೂಪದ ಕ್ರಮ
ನವದೆಹಲಿ, ಜೂನ್ 16 : ದೇಶದ ಅತ್ಯಂತ ಸ್ಪರ್ಧಾತ್ಮಕ ಮತ್ತು ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ (NEET-UG) ಅನ್ನು ಯಾವುದೇ ಅಕ್ರಮವಿಲ್ಲದೆ ನಡೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪರೀಕ್ಷೆಯ ಪಾವಿತ್ರ್ಯ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವ ನಿಟ್ಟಿನಲ್ಲಿ ಟೆಲಿಗ್ರಾಂ (Telegram)ಮೆಸೇಜಿಂಗ್ ವೇದಿಕೆಯ ಮೇಲೆ ಜೂನ್ 22ರವರೆಗೆ ತಾತ್ಕಾಲಿಕ ನಿರ್ಬಂಧ (Telegram ban) ಹೇರಲಾಗಿದೆ ಎಂದು ವರದಿಯಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ನೀಟ್ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು, ನಕಲು ಜಾಲಗಳ ಚಟುವಟಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹರಡಿದ ವದಂತಿಗಳು ದೇಶಾದ್ಯಂತ ತೀವ್ರ ಚರರ್ಚೆಗೆ ಕಾರಣವಾಗಿದ್ದವು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ಲೋಪಕ್ಕೆ ಅವಕಾಶ ನೀಡದಂತೆ ಕೇಂದ್ರ ಸರ್ಕಾರ ಹಾಗೂ ಭದ್ರತಾ ಸಂಸ್ಥೆಗಳು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿವೆ.
ಮೂಲಗಳ ಪ್ರಕಾರ, ಕೆಲ ಗುಂಪುಗಳು ಡಿಜಿಟಲ್ ವೇದಿಕೆಗಳನ್ನು ಬಳಸಿಕೊಂಡು ಪರೀಕ್ಷೆಗೆ ಸಂಬಂಧಿಸಿದ ನಕಲಿ ಪ್ರಶ್ನೆಪತ್ರಿಕೆಗಳು, ಸುಳ್ಳು ಮಾಹಿತಿಗಳು ಹಾಗೂ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟುಮಾಡುವ ಸಂದೇಶಗಳನ್ನು ಹರಡುತ್ತಿರುವ ಬಗ್ಗೆ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ಲಭಿಸಿತ್ತು. ಇದರ ಬೆನ್ನಲ್ಲೇ ಟೆಲಿಗ್ರಾಂ ಮೇಲಿನ ತಾತ್ಕಾಲಿಕ ನಿರ್ಬಂಧದ ನಿರ್ಧಾರಕ್ಕೆ ಆದ್ಯತೆ ನೀಡಲಾಗಿದೆ.
ನೀಟ್ ಪರೀಕ್ಷೆ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಪರೀಕ್ಷೆಯಾಗಿರುವುದರಿಂದ ಅದರ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತತೆ ಕಾಪಾಡುವುದು ಅತ್ಯಗತ್ಯವಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಈಗಾಗಲೇ ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಸಾಧನಗಳ ಬಳಕೆಗೆ ನಿಷೇಧವಿದ್ದು, ಸೈಬರ್ ನಿಗಾವನ್ನೂ ಮತ್ತಷ್ಟು ಬಲಪಡಿಸಲಾಗಿದೆ.
ಶಿಕ್ಷಣ ತಜ್ಞರ ಅಭಿಪ್ರಾಯದಂತೆ, ತಂತ್ರಜ್ಞಾನದ ದುರುಪಯೋಗ ಹೆಚ್ಚುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಭದ್ರತೆಗೆ ಇಂತಹ ಕ್ರಮಗಳು ಅಗತ್ಯವಾಗಿವೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ನ್ಯಾಯ ದೊರಕಬೇಕು ಮತ್ತು ಅಕ್ರಮಗಳಿಗೆ ಯಾವುದೇ ಅವಕಾಶ ಸಿಗಬಾರದು ಎಂಬ ಸಂದೇಶವನ್ನು ಈ ಕ್ರಮ ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಪರೀಕ್ಷಾ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಯಾವುದೇ ಅಪರಿಚಿತ ಮಾಹಿತಿ, ಪ್ರಶ್ನೆಪತ್ರಿಕೆ ಅಥವಾ ಸಂದೇಶಗಳನ್ನು ವಿದ್ಯಾರ್ಥಿಗಳು ನಂಬದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಧಿಕೃತ ಮಾಹಿತಿಗಾಗಿ ಮಾತ್ರ ಸಂಬಂಧಿತ ಪರೀಕ್ಷಾ ಪ್ರಾಧಿಕಾರಗಳ ಪ್ರಕಟಣೆಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ.
ನೀಟ್ ಪರೀಕ್ಷೆಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೈಗೊಳ್ಳಲಾದ ಈ ಕ್ರಮ ರಾಷ್ಟ್ರದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಪರೀಕ್ಷಾ ಭದ್ರತೆಯ ವಿಷಯದಲ್ಲಿ ಸರ್ಕಾರ ಕಟ್ಟುನಿಟ್ಟಿನ ನಿಲುವು ತಾಳಿದೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಮತ್ತಷ್ಟು ಓದಿ :
NEET ಮರುಪರೀಕ್ಷೆಗೆ ಸೇನೆ ನೆರವು? ಪ್ರಶ್ನೆಪತ್ರಿಕೆ ಸಾಗಾಟಕ್ಕೆ ವಾಯುಪಡೆ ವಿಮಾನ ಬಳಕೆ ಚಿಂತನೆ
NEET ವಿವಾದಕ್ಕೆ ಬೀದಿಗಿಳಿಯಲು ‘ಕಾಕ್‌ರೋಚ್ ಜನತಾ ಪಾರ್ಟಿ’ ಸಜ್ಜು : ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ












1 thought on “ನೀಟ್ ಭದ್ರತೆಗೆ ಟೆಲಿಗ್ರಾಂ ಬಂದ್! Telegram ban in India”