ಬಂಟ್ವಾಳ : ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ಕಬ್ಬಿಣದ ಪೈಪ್ ತಗುಲಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ಬಂಟ್ವಾಳ ತಾಲೂಕಿನ ಮೇರಮಜಲು ಸಮೀಪ ನಡೆದಿದೆ.
ಮೃತರನ್ನು ಮೇರಮಜಲು ನಿವಾಸಿ ಎ. ಇಸ್ಮಾಯಿಲ್ (58) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಮನೆಯ ಮುಂಭಾಗದಲ್ಲಿರುವ ಗೂಡಂಗಡಿಗೆ ಶೆಡ್ ನಿರ್ಮಿಸುವ ಉದ್ದೇಶದಿಂದ ಇಸ್ಮಾಯಿಲ್ ಅವರು ಎರಡು ಕಬ್ಬಿಣದ ಪೈಪ್ಗಳನ್ನು ಅಳವಡಿಸಿದ್ದರು. ಬಳಿಕ ಸುಮಾರು 20 ಅಡಿ ಉದ್ದದ ಮತ್ತೊಂದು ಕಬ್ಬಿಣದ ಪೈಪ್ನ್ನು ತಂದು ಮೇಲಕ್ಕೆ ಎತ್ತಿ, ಅದರೊಳಗಿದ್ದ ಮರಳನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದರು.
ಈ ವೇಳೆ ಅಂಗಡಿಯ ಮುಂಭಾಗದಿಂದ ಹಾದುಹೋಗಿದ್ದ ವಿದ್ಯುತ್ ತಂತಿಗೆ ಕಬ್ಬಿಣದ ಪೈಪ್ ಆಕಸ್ಮಿಕವಾಗಿ ತಗುಲಿದೆ. ಇದರಿಂದ ಕ್ಷಣಾರ್ಧದಲ್ಲೇ ಇಸ್ಮಾಯಿಲ್ ಅವರಿಗೆ ವಿದ್ಯುತ್ ಶಾಕ್ ಹೊಡೆದು ಅವರು ನೆಲಕ್ಕೆ ಕುಸಿದು ಬಿದ್ದಿದ್ದಾರೆ.
ಘಟನೆಯ ತಕ್ಷಣ ಸ್ಥಳದಲ್ಲಿದ್ದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅದೇ ರಾತ್ರಿ ಅವರು ಮೃತಪಟ್ಟಿದ್ದಾರೆ ಎಂದು ಮೃತರ ಪುತ್ರ ಮಹಮ್ಮದ್ ಸಫ್ವಾನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಕುರಿತು ತನಿಖೆ ಕೈಗೊಂಡಿದ್ದಾರೆ.
ಮತ್ತಷ್ಟು ಓದಿ :
ವಿಟ್ಲದಲ್ಲಿ ಮಟ್ಕಾ ಜೂಜಾಟಕ್ಕೆ ಪೊಲೀಸರ ಬ್ರೇಕ್ : ದಾಳಿಯಲ್ಲಿ ಓರ್ವ ವಶ, ಮೊಬೈಲ್ ಮತ್ತು ನಗದು ಜಪ್ತಿ
ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿ, ಪಾದಚಾರಿ ಗಂಭೀರ ಗಾಯ











2 thoughts on “ಬಂಟ್ವಾಳ : ವಿದ್ಯುತ್ ತಂತಿಗೆ ಕಬ್ಬಿಣದ ಪೈಪ್ ತಗುಲಿ ಶಾಕ್, ವ್ಯಕ್ತಿ ದುರ್ಮರಣ”