---Advertisement---

ಮಂಗಳೂರಿನಲ್ಲಿ ಸೈಬರ್ ವಂಚನೆಗೆ ಬ್ಯಾಂಕ್ ಖಾತೆ ದುರ್ಬಳಕೆ ಆರೋಪ: ಸ್ನೇಹಿತನ ವಿರುದ್ಧ ಯುವಕನ ದೂರು

drusti news logo
On: July 22, 2026
ಮಂಗಳೂರಿನಲ್ಲಿ ಸೈಬರ್ ವಂಚನೆಗೆ ಬ್ಯಾಂಕ್ ಖಾತೆ ದುರ್ಬಳಕೆ ಪ್ರಕರಣ
---Advertisement---

ಮಂಗಳೂರು: ವಿದೇಶದಿಂದ ಹಣ ವರ್ಗಾವಣೆ ಮಾಡಲು ಬ್ಯಾಂಕ್ ಖಾತೆ ಬೇಕು ಎಂದು ನಂಬಿಸಿ ಸ್ನೇಹಿತನ ಬ್ಯಾಂಕ್ ಖಾತೆಯನ್ನು ಪಡೆದು, ಬಳಿಕ ಅದನ್ನು ಸೈಬರ್ ವಂಚನೆ ಹಣ ವರ್ಗಾವಣೆಗೆ ಬಳಸಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಸುರತ್ಕಲ್ ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಮೊಹಮ್ಮದ್ ಹಮ್ರಾಜ್ ವಿರುದ್ಧ ಯುವಕನೊಬ್ಬ ಮಂಗಳೂರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ದೂರುದಾರ ಯುವಕ 2022ರಲ್ಲಿ ಬಲ್ಮಠದಲ್ಲಿರುವ ಐಟಿಐನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಸ್ನೇಹಿತನೊಬ್ಬನ ಪರಿಚಯವಾಗಿತ್ತು. ನಂತರ 2023ರ ಅಕ್ಟೋಬರ್ ತಿಂಗಳಲ್ಲಿ ಆ ಸ್ನೇಹಿತ, ಮೊಹಮ್ಮದ್ ಹಮ್ರಾಜ್ ಹಾಗೂ ಮೊಹಮ್ಮದ್ ನಿಜಾಮುದ್ದೀನ್ ಅವರನ್ನು ಪರಿಚಯಿಸಿದ್ದಾನೆ.

ಈ ವೇಳೆ ಮೊಹಮ್ಮದ್ ಹಮ್ರಾಜ್, ತನ್ನ ವಿದೇಶದಿಂದ ಹಣ ಬರಲಿದ್ದು, ಅದನ್ನು ಸ್ವೀಕರಿಸಲು ಬ್ಯಾಂಕ್ ಖಾತೆಯ ಅಗತ್ಯವಿದೆ ಎಂದು ತಿಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಮ್ರಾಜ್ ಮೇಲಿನ ನಂಬಿಕೆಯಿಂದ ದೂರುದಾರ ತನ್ನ ಕೆವೈಸಿ (KYC) ದಾಖಲೆಗಳನ್ನು ನೀಡಿ ಹೊಸ ಬ್ಯಾಂಕ್ ಖಾತೆ ತೆರೆದಿದ್ದಾನೆ. ಬಳಿಕ ಆ ಖಾತೆಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿ, ಬ್ಯಾಂಕ್ ಪಾಸ್‌ಬುಕ್, ಸಹಿ ಮಾಡಿರುವ ಚೆಕ್‌ಬುಕ್, ಎಟಿಎಂ ಕಾರ್ಡ್ ಹಾಗೂ ಸಿಮ್ ಕಾರ್ಡ್ ಅನ್ನು ಹಮ್ರಾಜ್‌ಗೆ ನೀಡಿದ್ದಾನೆ ಎನ್ನಲಾಗಿದೆ.

ಇದಕ್ಕೆ ಪ್ರತಿಯಾಗಿ ಹಮ್ರಾಜ್ ₹2,000 ನೀಡಿದ್ದಾನೆ. ನಂತರ ಆತನೊಂದಿಗೆ ಯಾವುದೇ ಸಂಪರ್ಕ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ತನ್ನ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆನ್‌ಲೈನ್ ವಂಚನೆ ಪ್ರಕರಣಗಳು ದಾಖಲಾಗಿರುವ ಮಾಹಿತಿ ದೂರುದಾರನಿಗೆ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗೆ ಭೇಟಿ ನೀಡಿ ವಿಚಾರಿಸಿದಾಗ, ಸೈಬರ್ ವಂಚನೆಯಿಂದ ಬಂದ ಹಣವನ್ನು ಆ ಖಾತೆಗೆ ವರ್ಗಾವಣೆ ಮಾಡಿ, ಬಳಿಕ ಚೆಕ್ ಮೂಲಕ ಹಣವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ.

ಈ ಖಾತೆಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವುದಲ್ಲದೆ, ಬ್ಯಾಂಕ್ ಖಾತೆಯನ್ನು ಕೂಡ ಫ್ರೀಜ್ (Freeze) ಮಾಡಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತನ್ನ ಬ್ಯಾಂಕ್ ಖಾತೆಯನ್ನು ದುರ್ಬಳಕೆ ಮಾಡಿ ಸೈಬರ್ ವಂಚನೆಗೆ ಬಳಸಿರುವ ಮೊಹಮ್ಮದ್ ಹಮ್ರಾಜ್ ಹಾಗೂ ಈ ಕೃತ್ಯದಲ್ಲಿ ಭಾಗಿಯಾಗಿರುವ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರುದಾರ ಮನವಿ ಮಾಡಿದ್ದಾರೆ.

ಈ ಸಂಬಂಧ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪಾತ್ರ ಹಾಗೂ ಹಣದ ವಹಿವಾಟಿನ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ಸಾರ್ವಜನಿಕರಿಗೆ ತಮ್ಮ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್, ಚೆಕ್‌ಬುಕ್, ಸಿಮ್ ಕಾರ್ಡ್ ಅಥವಾ ಕೆವೈಸಿ ದಾಖಲೆಗಳನ್ನು ಅಪರಿಚಿತರು ಅಥವಾ ಇತರರ ಬಳಕೆಗೆ ನೀಡಬಾರದು ಎಂದು ಸಲಹೆ ನೀಡಿದ್ದಾರೆ. ಇಂತಹ ನಿರ್ಲಕ್ಷ್ಯದಿಂದ ಸೈಬರ್ ವಂಚನೆ ಪ್ರಕರಣಗಳಲ್ಲಿ ನಿರಪರಾಧಿಗಳೂ ಕಾನೂನು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.


ಮತ್ತಷ್ಟು ಓದಿ :

ಬೆಳ್ತಂಗಡಿಯಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್‌ ಮೂಲಕ ₹87.22 ಲಕ್ಷ ವಂಚನೆ: ಮದುವೆ ಹೆಸರಿನಲ್ಲಿ ಉದ್ಯಮಿಗೆ ಭಾರೀ ಮೋಸ

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

Leave a Comment