ನಕಲಿ ಅಧಿಕಾರಿಗಳಂತೆ ನಟಿಸಿ FIR, ವಾರಂಟ್ ಹೆಸರಿನಲ್ಲಿ ಭಯ ಹುಟ್ಟಿಸಿದ ವಂಚಕರು; ಚಿನ್ನ ಅಡವಿಟ್ಟು ಹಣ ಕಳುಹಿಸುವಂತೆ ಮಾಡಿದ್ದ ಆರೋಪ
ಮಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಭಯ ಹುಟ್ಟಿಸಿ 64 ವರ್ಷದ ಹಿರಿಯ ನಾಗರಿಕರೊಬ್ಬರಿಂದ ಒಟ್ಟು ₹31 ಲಕ್ಷ ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
‘ಡೇಟಾ ಪ್ರೊಟೆಕ್ಷನ್ ಬೋರ್ಡ್ ಅಧಿಕಾರಿ’ ಎಂದು ಕರೆ
ದೂರಿನ ಪ್ರಕಾರ, ಜುಲೈ 15ರಂದು ಮನೆಯಲ್ಲಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ತಾನು ಡೇಟಾ ಪ್ರೊಟೆಕ್ಷನ್ ಬೋರ್ಡ್ ಆಫ್ ಇಂಡಿಯಾ ಅಧಿಕಾರಿ ಆರ್.ಕೆ. ಚೌಧರಿ ಎಂದು ಪರಿಚಯಿಸಿಕೊಂಡಿದ್ದಾನೆ.
ನಿಮ್ಮ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್ ಪಡೆದು ಮಕ್ಕಳಿಗೆ ಅಶ್ಲೀಲ ಸಂದೇಶ ಹಾಗೂ ವಿಡಿಯೋಗಳನ್ನು ಕಳುಹಿಸಲಾಗಿದೆ. ಈ ಕುರಿತು ಸುಮಾರು 20 ದೂರುಗಳು ದಾಖಲಾಗಿವೆ ಎಂದು ಹೇಳಿ ಆತಂಕ ಸೃಷ್ಟಿಸಿದ್ದಾನೆ.
ನಕಲಿ ಸೈಬರ್ ಸೆಲ್ ಅಧಿಕಾರಿಯಿಂದ ಬೆದರಿಕೆ
ಬಳಿಕ ಕರೆ ಮುಂಬೈ ಸೈಬರ್ ಸೆಲ್ ಅಧಿಕಾರಿಗೆ ವರ್ಗಾಯಿಸುವುದಾಗಿ ಹೇಳಿ, ಮತ್ತೊಬ್ಬ ವ್ಯಕ್ತಿ ನಿಮ್ಮ ವಿರುದ್ಧ ವಿವಿಧ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಎಫ್ಐಆರ್ ಕೂಡ ದಾಖಲಾಗಿದೆ ಎಂದು ಬೆದರಿಕೆ ಹಾಕಿದ್ದಾನೆ.
ಅದೇ ದಿನ ಮತ್ತೊಂದು ಸಂಖ್ಯೆಯಿಂದ ವಿಡಿಯೋ ಕರೆ ಮಾಡಿ, ತನ್ನ ಹೆಸರು ಸಂಜಯ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಪ್ರಕರಣದ ಬಗ್ಗೆ ಮತ್ತಷ್ಟು ಬೆದರಿಕೆ ಹಾಕಿದ್ದಾನೆ.
ಬ್ಯಾಂಕ್ ಖಾತೆ ವಿವರ ಪಡೆದು ಹಣ ವರ್ಗಾವಣೆ
ಜುಲೈ 16ರಂದು ಮತ್ತೆ ವಿಡಿಯೋ ಕರೆ ಮಾಡಿದ ವಂಚಕರು, ಹಿರಿಯ ನಾಗರಿಕರ ಆಸ್ತಿ ಹಾಗೂ ಬ್ಯಾಂಕ್ ಖಾತೆಯ ಸಂಪೂರ್ಣ ವಿವರಗಳನ್ನು ಪಡೆದುಕೊಂಡಿದ್ದಾರೆ.
ಜುಲೈ 17ರಂದು ನಿಮ್ಮ ಹೆಸರಿನಲ್ಲಿ ವಾರಂಟ್ ಹೊರಡಿಸಲಾಗಿದೆ ಎಂದು ಹೇಳಿ, ಹಣ ಪರಿಶೀಲನೆಗಾಗಿ ₹3.80 ಲಕ್ಷವನ್ನು ನಿರ್ದಿಷ್ಟ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ (RTGS) ಮೂಲಕ ವರ್ಗಾಯಿಸುವಂತೆ ಸೂಚಿಸಿದ್ದಾರೆ. ಇದನ್ನು ನಂಬಿದ ಹಿರಿಯ ನಾಗರಿಕರು ಹಣ ವರ್ಗಾಯಿಸಿದ್ದಾರೆ.
ಚಿನ್ನ ಅಡವಿಟ್ಟು ₹27.20 ಲಕ್ಷ ಕಳುಹಿಸಲು ಸೂಚನೆ
ಜುಲೈ 18ರಂದು ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ ವಂಚಕರು, ಮನೆಯಲ್ಲಿದ್ದ ಚಿನ್ನಾಭರಣವನ್ನು ಅಡವಿಟ್ಟು ಹಣ ಕಳುಹಿಸುವಂತೆ ಸೂಚಿಸಿದ್ದಾರೆ.
ಅದರಂತೆ ಹಿರಿಯ ನಾಗರಿಕರು ಫೈನಾನ್ಸ್ ಸಂಸ್ಥೆಯಲ್ಲಿ ಚಿನ್ನಾಭರಣ ಅಡವಿಟ್ಟು ₹29 ಲಕ್ಷ ಸಾಲ ಪಡೆದಿದ್ದು, ಅದರಲ್ಲಿ ₹27.20 ಲಕ್ಷವನ್ನು ವಂಚಕರು ಸೂಚಿಸಿದ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ.
₹31 ಲಕ್ಷ ವಂಚನೆ; ಪ್ರಕರಣ ದಾಖಲು
ಬಳಿಕ ತಾವು ವಂಚನೆಗೆ ಒಳಗಾಗಿರುವುದು ಅರಿತ ಹಿರಿಯ ನಾಗರಿಕರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಕಲಿ ಸರ್ಕಾರಿ ಅಧಿಕಾರಿಗಳಂತೆ ನಟಿಸಿ, ಡಿಜಿಟಲ್ ಅರೆಸ್ಟ್, ಎಫ್ಐಆರ್ ಹಾಗೂ ವಾರಂಟ್ ಹೆಸರಿನಲ್ಲಿ ಬೆದರಿಕೆ ಹಾಕಿ ಒಟ್ಟು ₹31 ಲಕ್ಷ ವಂಚಿಸಿರುವ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
ಮತ್ತಷ್ಟು ಓದಿ :
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ ಮುನ್ನೆಚ್ಚರಿಕೆ: ಜುಲೈ 24ರಂದು ಶಾಲೆ, ಅಂಗನವಾಡಿಗಳಿಗೆ ರಜೆ ಘೋಷಣೆ
ಪುತ್ತೂರಿನಲ್ಲಿ ನಿಷೇಧಿತ ಮಾದಕ ವಸ್ತು ಸೇವನೆ ಆರೋಪ: ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿ ಬಂಧನ
















1 thought on “ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ₹31 ಲಕ್ಷ ಸೈಬರ್ ವಂಚನೆ: ಹಿರಿಯ ನಾಗರಿಕನಿಗೆ ಬೆದರಿಸಿ ಹಣ ದೋಚಿದ ಖದೀಮರು”