ದಕ್ಷಿಣ ಕನ್ನಡ: ತುರ್ತು ಪರಿಸ್ಥಿತಿಯಲ್ಲಿ ಜನರ ನೆರವಿಗೆ ಧಾವಿಸುವ ಆಂಬುಲೆನ್ಸ್ ಚಾಲಕರನ್ನು ಸಾಮಾನ್ಯವಾಗಿ ಜೀವ ರಕ್ಷಕರಾಗಿ ಕಾಣಲಾಗುತ್ತದೆ. ಆದರೆ ಬೆಳ್ತಂಗಡಿಯಲ್ಲಿ ಸಮಾಜ ಸೇವಕ ಹಾಗೂ ಆಂಬುಲೆನ್ಸ್ ಚಾಲಕರಾಗಿ ಜನಪ್ರಿಯರಾಗಿದ್ದ ಜಲೀಲ್ ಬಾಬಾ ಇದೀಗ ಭಾರೀ ಡ್ರಗ್ಸ್ ಜಾಲದ ತನಿಖೆಯಲ್ಲಿ ಪ್ರಮುಖ ಆರೋಪಿಯಾಗಿ ಹೊರಹೊಮ್ಮಿರುವುದು ಸಂಚಲನ ಮೂಡಿಸಿದೆ.
ದಿನದ 24 ಗಂಟೆಯೂ ಲಭ್ಯವಿರುವ ಆಂಬುಲೆನ್ಸ್ ಸೇವೆ, ಉಚಿತ ಸಮಾಜ ಸೇವೆ ಹಾಗೂ ಬಡವರಿಗೆ ನೆರವಾಗುವ ವ್ಯಕ್ತಿಯಾಗಿ ಹೆಸರು ಗಳಿಸಿದ್ದ ಜಲೀಲ್ ಬಾಬಾ ವಿರುದ್ಧ ಇದೀಗ ಎಂಡಿಎಂಎ (MDMA) ಡ್ರಗ್ಸ್ ಸಾಗಾಟ ಹಾಗೂ ವಿತರಣೆಯಲ್ಲಿ ಕೈವಾಡವಿರುವ ಆರೋಪ ಕೇಳಿಬಂದಿದೆ. ತನಿಖೆಯ ಬೆಳವಣಿಗೆಗಳ ನಡುವೆ ಆತ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ.
ಬಾಗಲಕೋಟೆ ಡ್ರಗ್ಸ್ ಪ್ರಕರಣದಲ್ಲಿ ಬೆಳಕಿಗೆ ಬಂದ ಹೆಸರು
ಬಾಗಲಕೋಟೆಯಲ್ಲಿ ಪತ್ತೆಯಾದ ಸುಮಾರು ₹5.50 ಕೋಟಿ ಮೌಲ್ಯದ 5.196 ಕೆಜಿ ಎಂಡಿಎಂಎ ಡ್ರಗ್ಸ್ ಪ್ರಕರಣದ ತನಿಖೆ ವೇಳೆ ಜಲೀಲ್ ಬಾಬಾ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆತ ಸಂಪರ್ಕಕ್ಕೆ ಸಿಗದೇ ಪರಾರಿಯಾಗಿರುವುದು ತನಿಖಾಧಿಕಾರಿಗಳ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಮಂಗಳೂರು ಸಿಸಿಬಿ ತನಿಖೆಯಿಂದ ಬಯಲಾದ ಡ್ರಗ್ಸ್ ಜಾಲ
ಕಳೆದ ಜೂನ್ 25ರಂದು, ಮಂಗಳೂರು ಸಿಸಿಬಿ ಪೊಲೀಸರು ಕುಳಾಯಿಗುಡ್ಡೆ ಪ್ರದೇಶದಲ್ಲಿ ದಾಳಿ ನಡೆಸಿ, ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನಿಂದ ಸುಮಾರು ₹1.50 ಲಕ್ಷ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡಿದ್ದರು.
ಈತನ ವಿಚಾರಣೆ ವೇಳೆ ದೆಹಲಿಯಿಂದ ಎಂಡಿಎಂಎ ಖರೀದಿಸಿ, ಬೆಂಗಳೂರಿನ ಮೂಲಕ ಕರಾವಳಿ ಭಾಗಕ್ಕೆ ಸಾಗಿಸುತ್ತಿದ್ದ ಜಾಲದ ಬಗ್ಗೆ ಮಹತ್ವದ ಮಾಹಿತಿ ಲಭಿಸಿತ್ತು. ಇದರ ಆಧಾರದ ಮೇಲೆ ಜುಲೈ 15ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದದ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು 5.196 ಕೆಜಿ ಎಂಡಿಎಂಎ ವಶಪಡಿಸಿಕೊಂಡಿದ್ದರು.
ಈ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿಯ ಇಂದಬೆಟ್ಟುವಿನ ಮೊಹಮ್ಮದ್ ಅಲ್ತಾಫ್, ಉಜಿರೆಯ ಹಳೆಪೇಟೆಯ ಮೊಹಮ್ಮದ್ ಮುಸ್ತಫಾ ಹಾಗೂ ಅಲ್ಫಾಜ್ ಎಂಬುವರನ್ನು ಬಂಧಿಸಲಾಗಿತ್ತು.
ಆಂಬುಲೆನ್ಸ್ ಮೂಲಕವೇ ಡ್ರಗ್ಸ್ ಸರಬರಾಜು ಮಾಡಿದ ಆರೋಪ
ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆ ಜಲೀಲ್ ಬಾಬಾ ಹೆಸರು ತನಿಖೆಯಲ್ಲಿ ಹೊರಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಎಂಡಿಎಂಎ ಪಡೆದುಕೊಳ್ಳುತ್ತಿದ್ದ ಜಲೀಲ್ ಬಾಬಾ, ತುರ್ತು ಸೇವೆಯ ನೆಪದಲ್ಲಿ ತನ್ನ ಆಂಬುಲೆನ್ಸ್‌ನಲ್ಲೇ ಡ್ರಗ್ಸ್ ಸಾಗಿಸಿ, ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳು, ವೈದ್ಯರು ಹಾಗೂ ಯುವಕರಿಗೆ ಸರಬರಾಜು ಮಾಡುತ್ತಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಲಭಿಸಿದೆ ಎಂದು ತಿಳಿದುಬಂದಿದೆ.
ನಾಲ್ಕನೇ ಆರೋಪಿಯಾಗಿ ಹೆಸರು; ಬಂಧನಕ್ಕೆ ಶೋಧ
ಪ್ರಕರಣದ ತನಿಖೆ ಮುಂದುವರಿದಿರುವ ಹಿನ್ನೆಲೆ ಜಲೀಲ್ ಬಾಬಾ ಕಳೆದ ಎಂಟು ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.
ಮಂಗಳೂರು ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಸಲ್ಲಿಸಿರುವ ವರದಿಯಲ್ಲಿ ಜಲೀಲ್ ಬಾಬಾನನ್ನು ನಾಲ್ಕನೇ ಆರೋಪಿಯಾಗಿ ಉಲ್ಲೇಖಿಸಿದ್ದು, ಆತನ ಬಂಧನ ಇನ್ನೂ ಬಾಕಿಯಿದೆ ಎಂದು ತಿಳಿಸಲಾಗಿದೆ.
ಆಶ್ರಯ ನೀಡಿದವರಿಗೂ ಕಾನೂನು ಕ್ರಮದ ಎಚ್ಚರಿಕೆ
ಜಲೀಲ್ ಬಾಬಾ ತಲೆಮರೆಸಿಕೊಳ್ಳಲು ಸಹಾಯ ಅಥವಾ ಆಶ್ರಯ ನೀಡುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಬಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಆರೋಪಿಯ ಪತ್ತೆಗಾಗಿ ವಿಶೇಷ ತಂಡಗಳು ಶೋಧ ಕಾರ್ಯ ಮುಂದುವರಿಸಿರುವುದಾಗಿ ತಿಳಿದುಬಂದಿದೆ.
ಈ ಬೆಳವಣಿಗೆ ಬೆಳ್ತಂಗಡಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಸಮಾಜ ಸೇವೆಯ ಹೆಸರಿನಲ್ಲಿ ಜನರ ವಿಶ್ವಾಸ ಗಳಿಸಿದ್ದ ವ್ಯಕ್ತಿಯ ವಿರುದ್ಧ ಇಂತಹ ಆರೋಪಗಳು ಹೊರಬಂದಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.
ಮತ್ತಷ್ಟು ಓದಿ :
ದಕ್ಷಿಣ ಕನ್ನಡದಲ್ಲಿ ಇನ್ನು ತಾಲೂಕುವಾರು ಮಳೆ ರಜೆ? ಜಿಲ್ಲಾಡಳಿತದ ಮಹತ್ವದ ಚಿಂತನೆ















1 thought on “ಸಮಾಜ ಸೇವೆಯ ಮುಖವಾಡದ ಹಿಂದೆ ಏನಿತ್ತು? ಬೆಳ್ತಂಗಡಿಯಲ್ಲಿ ಬೆಚ್ಚಿಬೀಳಿಸಿದ ತನಿಖೆಯ ವಿವರ!”