ಬೆಳ್ತಂಗಡಿ: ತಾಲೂಕಿನ ಶಿಶಿಲ ಗ್ರಾಮದ ಬಾಡಿಗುಡ್ಡೆ ಸಮೀಪದ ಕಪಿಲಾ ನದಿಯಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಿದ ಪರಿಣಾಮ ಸಿಲುಕಿಕೊಂಡಿದ್ದ 73 ವರ್ಷದ ವ್ಯಕ್ತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಾಹಸಮಯ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ನದಿಯ ಮಧ್ಯೆ ಸಿಲುಕಿದ್ದ ವ್ಯಕ್ತಿಯ ರಕ್ಷಣೆ
ಭಾರೀ ಮಳೆಯ ಹಿನ್ನೆಲೆಯಲ್ಲಿ ಕಪಿಲಾ ನದಿಯಲ್ಲಿ ನೀರಿನ ಮಟ್ಟ ಕ್ಷಣಾರ್ಧದಲ್ಲೇ ಏರಿಕೆಯಾಗಿದ್ದು, ಬಾಲಪ್ಪ (73) ಅವರು ನದಿಯ ಮಧ್ಯಭಾಗದಲ್ಲಿ ಸಿಲುಕಿಕೊಂಡಿದ್ದರು. ಇದನ್ನು ಗಮನಿಸಿದ ಸ್ಥಳೀಯ ಯುವಕರು ಕೂಡಲೇ ಶೌರ್ಯ ವಿಪತ್ತು ನಿರ್ವಹಣಾ ತಂಡಕ್ಕೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ತಕ್ಷಣ ತಂಡದ ಸದಸ್ಯರಾದ ರಾಧಾಕೃಷ್ಣ ಗುತ್ತು, ರಮೇಶ್ ಬೈರಕಟ್ಟ ಹಾಗೂ ಪರಿಣಿತ ಈಜುಗಾರ ಮೋಹನ ಗೌಡ ಬದ್ರಿಜಲು ಸ್ಥಳಕ್ಕೆ ಧಾವಿಸಿದರು. ಶಿಶಿಲೇಶ್ವರ ದೇವಸ್ಥಾನದ ವೆಂಟೆಡ್ ಅಣೆಕಟ್ಟಿನಿಂದ ಸುಮಾರು 900 ಮೀಟರ್ ಕೆಳಭಾಗದಲ್ಲಿ ಸಿಲುಕಿದ್ದ ಬಾಲಪ್ಪ ಅವರಿಗೆ ಮೊದಲು ಲೈಫ್ ಜಾಕೆಟ್ ಧರಿಸಿ, ನಂತರ ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ನದಿಯ ದಡಕ್ಕೆ ಕರೆತರಲಾಯಿತು. ಕಾರ್ಯಾಚರಣೆಯಲ್ಲಿ ಉಮೇಶ್ ಕುಕ್ಕೆ, ರೂಪೇಶ್ ಬೈಪಾಡಿ ಹಾಗೂ ದಿನೇಶ್ ಬಾಡಿಗುಡ್ಡೆ ಕೂಡ ಸಹಕರಿಸಿದರು.
ಭಾರೀ ಮಳೆಯಿಂದ ಬೆಳ್ತಂಗಡಿಯಲ್ಲಿ ಜನಜೀವನ ಅಸ್ತವ್ಯಸ್ತ
ಇದೇ ವೇಳೆ, ಬುಧವಾರ ಸುರಿದ ಭಾರೀ ಮಳೆಯಿಂದ ಬೆಳ್ತಂಗಡಿ ತಾಲೂಕಿನ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಉಜಿರೆ ಸೇರಿದಂತೆ ಹಲವು ಕಡೆಗಳಲ್ಲಿ ಚರಂಡಿ ನೀರು ರಸ್ತೆಗಳಿಗೆ ಹರಿದ ಪರಿಣಾಮ ವಾಹನ ಸವಾರರು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸಿದರು.
ರಾಷ್ಟ್ರೀಯ ಹೆದ್ದಾರಿಯ ಕೆಲ ಭಾಗಗಳಲ್ಲಿ ಒಳಚರಂಡಿ ಕಾಮಗಾರಿ ಅಪೂರ್ಣವಾಗಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಮಣ್ಣು ಚರಂಡಿಗಳಲ್ಲಿ ಸೇರಿ ನೀರಿನ ಹರಿವಿಗೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಚರಂಡಿಗಳನ್ನು ತಕ್ಷಣ ಸ್ವಚ್ಛಗೊಳಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮತ್ತಷ್ಟು ಓದಿ :
ಲಾವಣ್ಯ ಕೊಲೆ ಪ್ರಕರಣ: ಕೊಲೆಗೆ ಬಳಸಿದ ಕತ್ತಿ ಖರೀದಿಸಿದ್ದ ಅಂಗಡಿಯಲ್ಲಿ ಆರೋಪಿ ಚೇತನ್ನಿಂದ ಮಹಜರು











1 thought on “ಕಪಿಲಾ ನದಿಯಲ್ಲಿ ಸಿಲುಕಿದ್ದ 73 ವರ್ಷದ ವ್ಯಕ್ತಿಯ ಸಾಹಸಮಯ ರಕ್ಷಣೆ”