ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಹಾಗೂ ಹವಾಮಾನ ಬದಲಾವಣೆಯ ನಡುವೆ ಮಲೇರಿಯಾ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಚುರುಕುಗೊಳಿಸಿದೆ. ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಮಲೇರಿಯಾ ಪ್ರಕರಣಗಳು ದೃಢಪಟ್ಟಿದ್ದು, ಮಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಮಳೆ ಬಿಟ್ಟು ಬಿಟ್ಟು ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಮಲೇರಿಯಾ ಹರಡುವಿಕೆ ನಿಯಂತ್ರಿಸುವುದು ಆರೋಗ್ಯ ಇಲಾಖೆಗೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೂ ಇಲಾಖೆ ಮುಂದಾಗಿದೆ.
ಹೊರರಾಜ್ಯ ಕಾರ್ಮಿಕರ ಮೇಲೆ ಆರೋಗ್ಯ ಇಲಾಖೆಯ ಕಣ್ಣು
ದಕ್ಷಿಣ ಕನ್ನಡ ಜಿಲ್ಲೆಗೆ ಕಟ್ಟಡ ನಿರ್ಮಾಣ ಹಾಗೂ ವಿವಿಧ ಕಾಮಗಾರಿಗಳಿಗಾಗಿ ಹೊರರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಆಗಮಿಸುತ್ತಿದ್ದಾರೆ. ಬಿಹಾರ, ಒಡಿಶಾ, ಛತ್ತೀಸ್‌ಗಢ ಸೇರಿದಂತೆ ಮಲೇರಿಯಾ ಪ್ರಕರಣಗಳು ವರದಿಯಾಗುವ ರಾಜ್ಯಗಳಿಂದ ಬರುವ ಕಾರ್ಮಿಕರಲ್ಲಿಯೂ ಸೋಂಕು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯ ತಪಾಸಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಇದುವರೆಗೆ ದೃಢಪಟ್ಟಿರುವ ಪ್ರಕರಣಗಳಲ್ಲಿ 23 ಮಂದಿ ಹೊರ ಜಿಲ್ಲೆ ಅಥವಾ ಹೊರರಾಜ್ಯದಿಂದ ಬಂದವರಾಗಿದ್ದಾರೆ ಎಂದು ತಿಳಿದುಬಂದಿದೆ. ಉದ್ಯೋಗ, ಶಿಕ್ಷಣ ಹಾಗೂ ಇತರ ಕಾರಣಗಳಿಗಾಗಿ ಮಂಗಳೂರಿಗೆ ಆಗಮಿಸುವವರಲ್ಲಿ ಕೆಲವರು ಈಗಾಗಲೇ ಜ್ವರದಂತಹ ಲಕ್ಷಣಗಳನ್ನು ಹೊಂದಿರುವುದು ಕಂಡುಬರುತ್ತಿದ್ದು, ಸೋಂಕು ಹರಡುವ ಸಾಧ್ಯತೆಯನ್ನು ತಗ್ಗಿಸಲು ಆರೋಗ್ಯ ಇಲಾಖೆ ನಿಗಾ ವಹಿಸುತ್ತಿದೆ.
ನಿರ್ಮಾಣ ಸ್ಥಳಗಳಲ್ಲಿ ರಕ್ತ ಪರೀಕ್ಷೆ; ವಿಶೇಷ ತಂಡ ರಚನೆ
ಮಲೇರಿಯಾ ನಿಯಂತ್ರಣಕ್ಕಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಲ್ಲಿನ ಕಾರ್ಮಿಕರ ಆರೋಗ್ಯದ ಮೇಲೆ ವಿಶೇಷ ನಿಗಾ ಇರಿಸಲು ಆರೋಗ್ಯ ಇಲಾಖೆ ತಂಡವನ್ನು ರಚಿಸಿದೆ. ಈ ತಂಡಗಳು ವಿವಿಧ ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡಿ ಕಾರ್ಮಿಕರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಿವೆ.
ಇದರೊಂದಿಗೆ ಕಟ್ಟಡ ಕಾಮಗಾರಿ ಪ್ರದೇಶಗಳಲ್ಲಿ ನೀರು ನಿಂತಿರುವ ಸ್ಥಳಗಳು ಹಾಗೂ ನೀರಿನ ತೊಟ್ಟಿಗಳ ಪರಿಶೀಲನೆಯನ್ನೂ ನಡೆಸಲಾಗುತ್ತಿದೆ. ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ಪ್ರದೇಶಗಳ ಬಗ್ಗೆ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿ ಮುನ್ನೆಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಹೊರರಾಜ್ಯದಿಂದ ಆಗಮಿಸುವ ಕಾರ್ಮಿಕರನ್ನು ಮಲೇರಿಯಾ ಪರೀಕ್ಷೆಗೆ ಒಳಪಡಿಸಿದ ಬಳಿಕ ಕೆಲಸಕ್ಕೆ ನಿಯೋಜಿಸುವಂತೆ ನಿರ್ಮಾಣ ಸಂಸ್ಥೆಗಳಿಗೂ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಮತ್ತಷ್ಟು ಓದಿ :
ಹೋಟೆಲ್‌ಗಳ ಬಳಿಕ ಹಾಸ್ಟೆಲ್, ಪಿಜಿಗಳತ್ತ ಆರೋಗ್ಯ ಇಲಾಖೆಯ ಚಿತ್ತ; ಆಹಾರ ತಪಾಸಣೆಗೆ ಖಾದರ್ ಸೂಚನೆ











1 thought on “ಮಂಗಳೂರಿನಲ್ಲಿ ಮಲೇರಿಯಾ ಪ್ರಕರಣಗಳ ಏರಿಕೆ; 30ಕ್ಕೂ ಹೆಚ್ಚು ಪ್ರಕರಣ ದೃಢ, ಹೊರರಾಜ್ಯ ಕಾರ್ಮಿಕರ ಮೇಲೆ ವಿಶೇಷ ನಿಗಾ”