ಮೈಸೂರು: “ಕುಳಿತಲ್ಲೇ ಲಕ್ಷ ಲಕ್ಷ ಸಂಪಾದನೆ”, “ನಿಮ್ಮ ಅಸಲು ಹಣ ಸುರಕ್ಷಿತ”, “ಪ್ರತಿ ತಿಂಗಳು 40% ಡಿವಿಡೆಂಡ್” – ಇಂತಹ ಮಾತುಗಳನ್ನು ಕೇಳಿದರೆ ಯಾರಿಗಾದರೂ ಹೂಡಿಕೆ ಮಾಡಲು ಆಸೆಯಾಗಬಹುದು. ಆದರೆ ಇದೇ ಆಮಿಷಕ್ಕೆ ಬಿದ್ದ ಮೈಸೂರಿನ ಉದ್ಯಮಿ ಮತ್ತು ಅವರ ಸ್ನೇಹಿತರ ಬಳಗ ಇದೀಗ ಬರೋಬ್ಬರಿ 2 ಕೋಟಿ ರೂಪಾಯಿ ಕಳೆದುಕೊಂಡಿರುವ ಬೆಚ್ಚಿಬೀಳಿಸುವ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಮೈಸೂರಿನ ಜೆ.ಪಿ. ನಗರದ ಉದ್ಯಮಿಯೊಬ್ಬರಿಗೆ 2025ರ ಜುಲೈ ತಿಂಗಳಲ್ಲಿ ಜಾರ್ಖಂಡ್ ಮೂಲದ ಗೌರವ್ ಸಿಂಗ್ ರಾಥೋಡ್ ಎಂಬಾತನ ಪರಿಚಯವಾಗಿತ್ತು. ಆತ ಹೈಟೆಕ್ ಟ್ರೇಡಿಂಗ್ ಮೂಲಕ ಹೂಡಿಕೆ ಮಾಡಿದರೆ ಮೂಲಧನ ಸುರಕ್ಷಿತವಾಗಿರುತ್ತದೆ ಹಾಗೂ ಪ್ರತಿ ತಿಂಗಳು 40% ರಷ್ಟು ಲಾಭ ನೀಡುವುದಾಗಿ ಭರವಸೆ ನೀಡಿದ್ದಾನೆ.
ಮೊದಲಿಗೆ ಉದ್ಯಮಿಯ ವಿಶ್ವಾಸ ಗಳಿಸಲು ಆತ ಚಾಣಾಕ್ಷತನದಿಂದ ನಡೆದುಕೊಂಡಿದ್ದಾನೆ. ಹೂಡಿಕೆ ಮಾಡಿದ ಕೆಲವೇ ದಿನಗಳಲ್ಲಿ ಸುಮಾರು 6 ಲಕ್ಷ ರೂಪಾಯಿ ಲಾಭಾಂಶ ನೀಡಿದ್ದಾನೆ. ಈ ಲಾಭವನ್ನು ಕಂಡ ಉದ್ಯಮಿಗೆ ಯಾವುದೇ ಅನುಮಾನ ಮೂಡಿಲ್ಲ. ಬದಲಾಗಿ ಈ ಹೂಡಿಕೆ ಯೋಜನೆ ನಿಜವಾಗಿಯೂ ಲಾಭದಾಯಕ ಎಂದು ನಂಬಿದ್ದಾರೆ.
ಈ ನಂಬಿಕೆಯ ಆಧಾರದ ಮೇಲೆ ಉದ್ಯಮಿ ತಮ್ಮ ಪರಿಚಯದ ಆರು ಮಂದಿ ಸ್ನೇಹಿತರಿಗೂ ಈ ಹೂಡಿಕೆ ಯೋಜನೆಯನ್ನು ಪರಿಚಯಿಸಿದ್ದಾರೆ. ಉದ್ಯಮಿ ಹಾಗೂ ಅವರ ಸ್ನೇಹಿತರು ಸೇರಿ ಹಂತ ಹಂತವಾಗಿ ಒಟ್ಟು 2 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಆರೋಪಿಯ ಖಾತೆಗೆ ವರ್ಗಾಯಿಸಿದ್ದಾರೆ.
ಆದರೆ ಹಣ ಸಂಪೂರ್ಣವಾಗಿ ವರ್ಗಾವಣೆ ಆದ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಆರಂಭದಲ್ಲಿ ನಿರಂತರ ಸಂಪರ್ಕದಲ್ಲಿದ್ದ ಗೌರವ್ ಸಿಂಗ್ ರಾಥೋಡ್, ಬಳಿಕ ಕರೆಗಳಿಗೆ ಸ್ಪಂದಿಸದೇ ನಾಪತ್ತೆಯಾಗಿದ್ದಾನೆ. ಹಲವು ಬಾರಿ ಸಂಪರ್ಕಿಸಲು ಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ ಉದ್ಯಮಿಗೆ ಅನುಮಾನ ಮೂಡಿದೆ.
ವಂಚನೆಯ ಸುಳಿವು ಸಿಕ್ಕ ಬಳಿಕ ಉದ್ಯಮಿ ನೇರವಾಗಿ ಜಾರ್ಖಂಡ್‌ಗೆ ತೆರಳಿ ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಆಗ ಬೆಚ್ಚಿಬೀಳಿಸುವ ಸತ್ಯ ಹೊರಬಂದಿದೆ. ಇದೇ ರೀತಿಯ ಟ್ರೇಡಿಂಗ್ ಮತ್ತು ಅಧಿಕ ಲಾಭದ ಆಮಿಷ ತೋರಿಸಿ ನೂರಾರು ಮಂದಿಗೆ ಇದೇ ವ್ಯಕ್ತಿ ವಂಚನೆ ಮಾಡಿರುವುದು ತಿಳಿದುಬಂದಿದೆ. ಆಗಷ್ಟೇ ತಾವು ಸಹ ದೊಡ್ಡ ಮೋಸದ ಜಾಲದಲ್ಲಿ ಸಿಲುಕಿರುವುದನ್ನು ಉದ್ಯಮಿ ಅರಿತುಕೊಂಡಿದ್ದಾರೆ.
ಈ ಸಂಬಂಧ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆದರೆ ಈಗಾಗಲೇ ವರ್ಗಾವಣೆಯಾದ ಕೋಟಿ ಕೋಟಿ ರೂಪಾಯಿ ಹಣವನ್ನು ಮರಳಿ ಪಡೆಯುವುದು ಸುಲಭವಲ್ಲ ಎನ್ನಲಾಗುತ್ತಿದೆ.
ಈ ಘಟನೆ ಮತ್ತೊಮ್ಮೆ ಸೈಬರ್ ವಂಚಕರು ಬಳಸುತ್ತಿರುವ ಹೊಸ ತಂತ್ರಗಳನ್ನು ಬಯಲಿಗೆಳೆದಿದೆ. ಆರಂಭದಲ್ಲಿ ಸ್ವಲ್ಪ ಪ್ರಮಾಣದ ಲಾಭ ನೀಡಿ ವಿಶ್ವಾಸ ಗಳಿಸುವುದು, ನಂತರ ಹೆಚ್ಚಿನ ಹೂಡಿಕೆ ಮಾಡಿಸುವುದು ಹಾಗೂ ಕೊನೆಗೆ ಹಣದೊಂದಿಗೆ ಪರಾರಿಯಾಗುವುದು ಎಂಬ ವಿಧಾನವನ್ನು ವಂಚಕರು ಅನುಸರಿಸುತ್ತಿದ್ದಾರೆ.
ಅಪರಿಚಿತ ವ್ಯಕ್ತಿಗಳ ಹೂಡಿಕೆ ಯೋಜನೆಗಳು, ಅಸಾಧಾರಣ ಲಾಭದ ಭರವಸೆಗಳು ಹಾಗೂ “ಕಡಿಮೆ ಸಮಯದಲ್ಲಿ ಹೆಚ್ಚು ಹಣ” ಎಂಬ ಆಮಿಷಗಳಿಗೆ ಬಲಿಯಾಗುವ ಮುನ್ನ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಯಾವುದೇ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಮೊದಲು ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಮತ್ತು ಸಂಬಂಧಿತ ಹಣಕಾಸು ಸಂಸ್ಥೆಗಳ ಅನುಮೋದನೆ ಇರುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.
ಮತ್ತಷ್ಟು ಓದಿ :
ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್ ಹೆಸರಲ್ಲಿ ₹17.6 ಲಕ್ಷ ದರೋಡೆ; ಇಬ್ಬರು ಕಾಶ್ಮೀರ ಪ್ರಜೆಗಳು ಸೇರಿ 12 ಆರೋಪಿಗಳ ಬಂಧನ












2 thoughts on “ತಿಂಗಳಿಗೆ 40% ಲಾಭದ ಆಮಿಷ… ಮೈಸೂರಿನ ಉದ್ಯಮಿ ಸೇರಿದಂತೆ 7 ಮಂದಿಯಿಂದ 2 ಕೋಟಿ ರೂ. ವಂಚನೆ!”