ಚೀನಾ-ಜಪಾನ್‌ನಿಂದ ಕಡಿಮೆ ದರಕ್ಕೆ ವಸ್ತು ತರಿಸುವ ಆಮಿಷ; ನಗದು ಹಣ ಕಸಿದು ಪರಾರಿಯಾಗಿದ್ದ ಆರೋಪಿಗಳ ಸೆರೆ
ಬೆಂಗಳೂರು: ಡಿಜಿಟಲ್ ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್ ಹೆಸರಿನಲ್ಲಿ ₹17.6 ಲಕ್ಷ ದರೋಡೆ ನಡೆಸಿದ ಪ್ರಕರಣವನ್ನು ಸಂಜಯನಗರ ಪೊಲೀಸರು ಭೇದಿಸಿದ್ದು, ಇಬ್ಬರು ಕಾಶ್ಮೀರ ಪ್ರಜೆಗಳು ಸೇರಿದಂತೆ ಒಟ್ಟು 12 ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯ ವೇಳೆ ₹13.90 ಲಕ್ಷ ನಗದು, ದರೋಡೆಗೆ ಬಳಸಿದ್ದ ವಾಹನಗಳು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಮುಜಾಮಿಲ್ (23), ಶೋಯೆಬ್ (20), ಕರೀಂ (31), ವಾಸೀಂ (40), ಮೊಹಮ್ಮದ್ ಇಸ್ಮಾಯಿಲ್ (29), ರೆಹಾನ್ (27), ಆಯನ್ (21), ಅಖಿಲ್ ಮೊಹಮ್ಮದ್ (26), ತೌಸಿಫ್ (32), ಲಿಯಾಕತ್ ಶರೀಫ್ (33), ಅಫ್ಜಲ್ ಖಾನ್ (27) ಹಾಗೂ ಇಮ್ರಾನ್ ಪಾಷಾ (40) ಎಂದು ಗುರುತಿಸಲಾಗಿದೆ. ಬಂಧಿತರಲ್ಲಿ ಇಬ್ಬರು ಕಾಶ್ಮೀರ ಪ್ರಜೆಗಳೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರುದಾರ ವಿಶ್ವಾಸ್ ಅವರು ಕಾಫಿ ಶಾಪ್ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದು, ಅದಕ್ಕಾಗಿ ಕಿಚನ್ ಟೈಲ್ಸ್ ಮತ್ತು ಕಟ್‌ಲರಿ ವಸ್ತುಗಳ ಖರೀದಿಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಈ ವೇಳೆ ಆರೋಪಿಗಳು ಚೀನಾ ಮತ್ತು ಜಪಾನ್‌ನಿಂದ ಈ ವಸ್ತುಗಳನ್ನು ಖರೀದಿಸಿದರೆ ಕಡಿಮೆ ದರದಲ್ಲಿ ದೊರೆಯುತ್ತದೆ ಎಂದು ನಂಬಿಸಿದ್ದರು. ಜೊತೆಗೆ ಡಿಜಿಟಲ್ ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್ ಮೂಲಕ ಹಣ ವರ್ಗಾವಣೆ ಮಾಡಿಕೊಡುವುದಾಗಿ ಹೇಳಿ ವಿಶ್ವಾಸ್ ಅವರನ್ನು ಸಂಪರ್ಕದಲ್ಲಿಟ್ಟಿದ್ದರು.
ಅದರಂತೆ, ಕಳೆದ 9ರಂದು ನಿಗದಿತ ಸ್ಥಳಕ್ಕೆ ₹17.6 ಲಕ್ಷ ನಗದು ಹಣದೊಂದಿಗೆ ಬಂದಿದ್ದ ವೇಳೆ ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಆಗಮಿಸಿ ಹಣವನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದರು.
ಈ ಘಟನೆ ಸಂಬಂಧ ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ವಿಶ್ವಾಸ್ ಅವರು ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ₹13.90 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ ಆರು ದ್ವಿಚಕ್ರ ವಾಹನಗಳು, ಒಂದು ಕಾರು ಹಾಗೂ 13 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಮತ್ತಷ್ಟು ಓದಿ :
ದ್ವಿಗುಣ ಲಾಭದ ಭರವಸೆ ನಂಬಿದ ಹಿರಿಯ ನಾಗರಿಕ; ಟ್ರೇಡಿಂಗ್ ಹೆಸರಿನಲ್ಲಿ ₹4 ಲಕ್ಷ ವಂಚನೆ
ಆನ್‌ಲೈನ್ ಉದ್ಯೋಗದ ಹೆಸರಿನಲ್ಲಿ ಮೋಸ : ವ್ಯಕ್ತಿಯಿಂದ ₹3.51 ಲಕ್ಷ ದೋಚಿದ ವಂಚಕರು
ಬೈಕ್ ಪಡೆದು ನಾಪತ್ತೆಯಾದ ವ್ಯಕ್ತಿ, ವಾಪಸ್ ಬೇಕಾದರೆ ₹20 ಸಾವಿರ ತರಲು ಒತ್ತಡ!













2 thoughts on “ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್ ಹೆಸರಲ್ಲಿ ₹17.6 ಲಕ್ಷ ದರೋಡೆ; ಇಬ್ಬರು ಕಾಶ್ಮೀರ ಪ್ರಜೆಗಳು ಸೇರಿ 12 ಆರೋಪಿಗಳ ಬಂಧನ”