ಬೆಂಗಳೂರು: ರಾಜ್ಯದ ಬಿಪಿಎಲ್ ಪಡಿತರ ಚೀಟಿಗಳ ಪರಿಷ್ಕರಣೆ ಹಾಗೂ ರದ್ದತಿ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಆಹಾರ ಇಲಾಖೆಯ ನೂತನ ಸಚಿವ ರಿಜ್ವಾನ್ ಅರ್ಷದ್ ಅವರು ಸದ್ಯಕ್ಕೆ ಬಿಪಿಎಲ್ ಕಾರ್ಡ್ ರದ್ದತಿ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೇ ವೇಳೆ ಎಲ್ಲಾ ಪಡಿತರ ಚೀಟಿ ಫಲಾನುಭವಿಗಳು ಸೆಪ್ಟೆಂಬರ್ 30ರೊಳಗೆ ಇ-ಕೆವೈಸಿ (e-KYC) ಪೂರ್ಣಗೊಳಿಸುವುದು ಕಡ್ಡಾಯ ಎಂದು ತಿಳಿಸಿದ್ದಾರೆ.
ಮಾನದಂಡ ಉಲ್ಲಂಘಿಸಿ ಪಡೆದಿರುವ ಕಾರ್ಡ್‌ಗಳ ಪರಿಶೀಲನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಗೊಂದಲವನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.
7.65 ಲಕ್ಷ ಕಾರ್ಡ್ಗಳು ಶಂಕಾಸ್ಪದ ಪಟ್ಟಿಯಲ್ಲಿ
ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿ ರಾಜ್ಯದ 7.65 ಲಕ್ಷ ಪಡಿತರ ಚೀಟಿಗಳನ್ನು ಶಂಕಾಸ್ಪದ ಪಟ್ಟಿಗೆ ಸೇರಿಸಿ ರಾಜ್ಯಕ್ಕೆ ಮಾಹಿತಿ ನೀಡಲಾಗಿತ್ತು. ಈ ಪೈಕಿ ಪರಿಶೀಲನೆ ನಡೆಸಿದ ಬಳಿಕ ಸುಮಾರು 3.50 ಲಕ್ಷ ಕಾರ್ಡ್‌ಗಳನ್ನು ಅನರ್ಹ ಎಂದು ಗುರುತಿಸಿ ಎಪಿಎಲ್ ವರ್ಗಕ್ಕೆ ಪರಿವರ್ತಿಸಲಾಗಿದೆ. ಉಳಿದ ಕಾರ್ಡ್‌ಗಳ ಪರಿಶೀಲನೆ ನಡೆಯುತ್ತಿತ್ತು.
ಆದರೆ ಸದ್ಯಕ್ಕೆ ಸಾರ್ವಜನಿಕರ ಹಿತದೃಷ್ಟಿಯಿಂದ ಬಿಪಿಎಲ್ ಕಾರ್ಡ್‌ಗಳ ರದ್ದು ಹಾಗೂ ಪರಿಷ್ಕರಣೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಸೆ.30ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಿ
ರಾಜ್ಯದಲ್ಲಿ ಬೋಗಸ್ ಕಾರ್ಡ್‌ಗಳನ್ನು ಪತ್ತೆಹಚ್ಚುವುದು ಹಾಗೂ ಪಡಿತರ ಸೋರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಇ-ಕೆವೈಸಿ ಪ್ರಕ್ರಿಯೆ ನಡೆಸಲಾಗುತ್ತಿದೆ. ರಾಜ್ಯದ ಸುಮಾರು 2.65 ಕೋಟಿ ಫಲಾನುಭವಿಗಳು ಸೆಪ್ಟೆಂಬರ್ 30ರೊಳಗೆ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿದ್ದಾರೆ.
ಇ-ಕೆವೈಸಿ ಪೂರ್ಣಗೊಂಡ ಬಳಿಕ ಅನರ್ಹ ಕಾರ್ಡ್‌ಗಳ ನಿಖರ ಸಂಖ್ಯೆ ತಿಳಿಯಲಿದ್ದು, ಆ ನಂತರ ಅರ್ಹ ಫಲಾನುಭವಿಗಳಿಗೆ ಹೊಸದಾಗಿ ಬಿಪಿಎಲ್ ಕಾರ್ಡ್ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ರಾಜ್ಯದಲ್ಲಿ ಇನ್ನೂ ಸುಮಾರು 50 ಲಕ್ಷ ಜನರಿಗೆ ಬಿಪಿಎಲ್ ಸೌಲಭ್ಯ ದೊರೆಯಬೇಕಿದೆ. ಹೊಸ ಪಡಿತರ ಚೀಟಿ ವಿತರಣೆಗೆ ಕೇಂದ್ರ ಸರ್ಕಾರದ ನಿರ್ಬಂಧ ಇರುವುದರಿಂದ ಈ ವಿಚಾರವನ್ನು ಕೇಂದ್ರದ ಗಮನಕ್ಕೆ ತರಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಅನ್ನಭಾಗ್ಯ ಅಕ್ಕಿ ಕಾಳಸಂತೆ ತಡೆಗೆ GPS, CCTV
ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಆಹಾರ ಇಲಾಖೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ರಾಜ್ಯದ ಗೋದಾಮುಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಹಾಗೂ ಆಹಾರ ಧಾನ್ಯ ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಯೋಜನೆ ರೂಪಿಸಲಾಗಿದೆ.
ಗೋದಾಮು ಹಾಗೂ ಸಾಗಣೆ ವ್ಯವಸ್ಥೆಯ ಮೇಲ್ವಿಚಾರಣೆಗಾಗಿ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಸ್ಥಾಪಿಸುವ ಮೂಲಕ ಅಕ್ರಮ ಸಾಗಣೆ ಮತ್ತು ಸೋರಿಕೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇದೇ ವೇಳೆ, ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳ ಬಯೋಮೆಟ್ರಿಕ್ ಪಡೆದ ಕೂಡಲೇ ಪಡಿತರ ವಿತರಿಸಬೇಕು. ಬೆರಳಚ್ಚು ಪಡೆದು ದಿನಗಟ್ಟಲೆ ಕಾಯಿಸುವುದು ಅಥವಾ ಬೇರೆ ದಿನ ಧಾನ್ಯ ನೀಡುವುದು ಕಂಡುಬಂದರೆ ಅಂತಹ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆ ಎಚ್ಚರಿಕೆ ನೀಡಿದೆ.
ಮತ್ತಷ್ಟು ಓದಿ :












1 thought on “ಬಿಪಿಎಲ್ ಕಾರ್ಡ್ : ಹೊಸ ಆಹಾರ ಸಚಿವರ ಮಹತ್ವದ ಸೂಚನೆ; ಸೆ.30ರೊಳಗೆ ಇ-ಕೆವೈಸಿ ಕಡ್ಡಾಯ”