ಚಿಕ್ಕಮಗಳೂರು: ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರ ಹೆಸರು ಹಾಗೂ ಫೋಟೋವನ್ನು ದುರ್ಬಳಕೆ ಮಾಡಿಕೊಂಡು ಸೈಬರ್ ವಂಚಕರು ಆಹಾರ ಇಲಾಖೆ ಅಧಿಕಾರಿಯೊಬ್ಬರಿಗೆ ₹50,000 ವಂಚಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ಸೃಷ್ಟಿಸಿದ್ದ ವಂಚಕರು, ಆಹಾರ ಇಲಾಖೆ ಉಪನಿರ್ದೇಶಕ ಯೋಗಾನಂದ್ ಅವರಿಗೆ ಸಂದೇಶ ಕಳುಹಿಸಿ ತುರ್ತಾಗಿ ಹಣ ವರ್ಗಾವಣೆ ಮಾಡುವಂತೆ ಸೂಚಿಸಿದ್ದರು. ಸಂದೇಶವು ಜಿಲ್ಲಾಧಿಕಾರಿ ಅವರಿಂದಲೇ ಬಂದಿದೆ ಎಂದು ನಂಬಿದ ಯೋಗಾನಂದ್, ವಂಚಕರು ನೀಡಿದ್ದ ಬ್ಯಾಂಕ್ ಖಾತೆಗೆ ₹50,000 ಹಣ ವರ್ಗಾವಣೆ ಮಾಡಿದ್ದಾರೆ.
ಹಣ ವರ್ಗಾವಣೆ ಮಾಡಿದ ಬಳಿಕ ತಾವು ಸೈಬರ್ ವಂಚನೆಯ ಜಾಲಕ್ಕೆ ಸಿಲುಕಿರುವುದು ಅಧಿಕಾರಿಗೆ ತಿಳಿದುಬಂದಿದೆ. ಕೂಡಲೇ ಅವರು ಈ ಕುರಿತು ಸೈಬರ್ ಕ್ರೈಂ, ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ (CEN) ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಥೈಲ್ಯಾಂಡ್ ನಂಬರ್ ಬಳಸಿ ನಕಲಿ ವಾಟ್ಸಪ್ ಖಾತೆ
ಪ್ರಾಥಮಿಕ ಮಾಹಿತಿಯ ಪ್ರಕಾರ, ವಂಚಕರು ಥೈಲ್ಯಾಂಡ್ನ ನಂಬರ್ ಬಳಸಿ ನಕಲಿ ವಾಟ್ಸಪ್ ಬಿಸಿನೆಸ್ ಖಾತೆಯನ್ನು ಸೃಷ್ಟಿಸಿದ್ದರು. ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರ ಹೆಸರು ಮತ್ತು ಫೋಟೋವನ್ನು ಬಳಸಿಕೊಂಡು ಫೇಕ್ ಪ್ರೊಫೈಲ್ ನಿರ್ಮಿಸಿ, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಂದೇಶ ಕಳುಹಿಸುತ್ತಿದ್ದರು.
ಮೊದಲಿಗೆ ‘ಎಲ್ಲಿದ್ದೀರಿ?’, ‘ಹೇಗಿದ್ದೀರಿ?’ ಎಂಬಂತಹ ಸಾಮಾನ್ಯ ಸಂದೇಶಗಳನ್ನು ಕಳುಹಿಸಿ ಪರಿಚಯ ಬೆಳೆಸಿಕೊಳ್ಳುವ ವಂಚಕರು, ಬಳಿಕ ತುರ್ತು ಹಣದ ಅಗತ್ಯವಿದೆ ಎಂದು ಹೇಳಿ ಹಣ ವರ್ಗಾವಣೆ ಮಾಡುವಂತೆ ಸೂಚಿಸುತ್ತಿದ್ದರು ಎನ್ನಲಾಗಿದೆ. ಇದೇ ರೀತಿಯ ತಂತ್ರದ ಮೂಲಕ ಆಹಾರ ಇಲಾಖೆ ಉಪನಿರ್ದೇಶಕ ಯೋಗಾನಂದ್ ಅವರಿಂದ ₹50,000 ಹಣ ವರ್ಗಾಯಿಸಿಕೊಳ್ಳಲಾಗಿದೆ.
ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಎಚ್ಚರಿಕೆ
ತಮ್ಮ ಹೆಸರು ಮತ್ತು ಫೋಟೋ ಬಳಸಿ ಸೈಬರ್ ವಂಚನೆ ನಡೆಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ಸಾರ್ವಜನಿಕರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಥೈಲ್ಯಾಂಡ್ ನಂಬರ್ಗಳಿಂದ ಬರುವ ವಾಟ್ಸಪ್ ಸಂದೇಶಗಳು ಅಥವಾ ಕರೆಗಳಿಗೆ ಪ್ರತಿಕ್ರಿಯಿಸದಂತೆ ಅವರು ಸೂಚಿಸಿದ್ದಾರೆ. ಜೊತೆಗೆ, ಅಪರಿಚಿತ ವ್ಯಕ್ತಿಗಳೊಂದಿಗೆ ಯಾವುದೇ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ವಿವರಗಳು ಅಥವಾ ಹಣಕಾಸಿಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಸೈಬರ್ ವಂಚಕರು ಅಧಿಕಾರಿಗಳು ಹಾಗೂ ಪರಿಚಿತ ವ್ಯಕ್ತಿಗಳ ಹೆಸರು, ಫೋಟೋ ಬಳಸಿ ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸಿ ನಂಬಿಕೆ ಗಳಿಸುವ ತಂತ್ರ ಬಳಸುತ್ತಿರುವ ಹಿನ್ನೆಲೆಯಲ್ಲಿ, ಯಾವುದೇ ಹಣಕಾಸಿನ ವ್ಯವಹಾರಕ್ಕೂ ಮುನ್ನ ಸಂದೇಶ ಕಳುಹಿಸಿದ ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ.
ಮತ್ತಷ್ಟು ಓದಿ :
ಆನ್ಲೈನ್ ಗೇಮಿಂಗ್ನಿಂದ ಸಾಲದ ಸುಳಿಗೆ; ಹಣ ಕಳೆದುಕೊಂಡ ಗೃಹಿಣಿ ಆತ್ಮಹತ್ಯೆ











1 thought on “ಚಿಕ್ಕಮಗಳೂರು ಡಿಸಿ ಹೆಸರಿನಲ್ಲಿ ಸೈಬರ್ ವಂಚನೆ : ಆಹಾರ ಇಲಾಖೆ ಅಧಿಕಾರಿಗೆ ₹50 ಸಾವಿರ ಪಂಗನಾಮ”