ಶಾಲಾ ವಯಸ್ಸಿನಲ್ಲೇ ACCA ಪೂರ್ಣಗೊಳಿಸಿ ವಿಶ್ವ ದಾಖಲೆ
ಸಾಮಾನ್ಯವಾಗಿ 16ನೇ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಶಾಲಾ ಶಿಕ್ಷಣ ಹಾಗೂ ಮುಂದಿನ ವೃತ್ತಿ ಆಯ್ಕೆ ಕುರಿತು ಯೋಚಿಸುತ್ತಿರುತ್ತಾರೆ. ಆದರೆ ಭಾರತೀಯ ಮೂಲದ ದುಬೈ ನಿವಾಸಿ ಲಕ್ಷ್ಮಣನ್ ಮೇಯ್ಯಪ್ಪನ್ ಈ ವಯಸ್ಸಿನಲ್ಲೇ ವೃತ್ತಿಪರ ಅಕೌಂಟಿಂಗ್ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಕೇವಲ 16ನೇ ವಯಸ್ಸಿನಲ್ಲಿ ACCA ಅರ್ಹತೆ ಪಡೆದು, ವಿಶ್ವದ ಅತ್ಯಂತ ಕಿರಿಯ ಪುರುಷ ಚಾರ್ಟರ್ಡ್ ಅಕೌಂಟೆಂಟ್ ಎಂಬ ದಾಖಲೆಗೆ ಅವರು ಪಾತ್ರರಾಗಿದ್ದಾರೆ.
ಲಕ್ಷ್ಮಣನ್ ಅವರ ಈ ಸಾಧನೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದ್ದು, ಚಿಕ್ಕ ವಯಸ್ಸಿನಲ್ಲೇ ವೃತ್ತಿಪರ ಶಿಕ್ಷಣದಲ್ಲಿ ಅವರು ತೋರಿದ ಆಸಕ್ತಿ ಗಮನ ಸೆಳೆದಿದೆ.

ತಾಯಿಯ ಮಾರ್ಗದರ್ಶನದಿಂದ ಶುರುವಾಯ್ತು ಫೈನಾನ್ಸ್ ಪಯಣ
ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ 10ನೇ ತರಗತಿಯ ಪರೀಕ್ಷೆ ಪೂರ್ಣಗೊಳಿಸಿದ ಬಳಿಕ ಲಕ್ಷ್ಮಣನ್ ಅವರಿಗೆ ಹಣಕಾಸು ಮತ್ತು ಅಕೌಂಟಿಂಗ್ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿತು. ACCA ಅರ್ಹತೆ ಹೊಂದಿರುವ ಅವರ ತಾಯಿ, ಈ ಅವಧಿಯಲ್ಲಿ ಮಗನಿಗೆ ಅಕೌಂಟಿಂಗ್‌ನ ಮೂಲಭೂತ ವಿಚಾರಗಳನ್ನು ಪರಿಚಯಿಸಿದರು.
ತಾಯಿಯ ಮಾರ್ಗದರ್ಶನದಿಂದ ಪ್ರೇರಣೆ ಪಡೆದ ಲಕ್ಷ್ಮಣನ್ 15ನೇ ವಯಸ್ಸಿನಲ್ಲಿ ACCA ಅಧ್ಯಯನ ಆರಂಭಿಸಿದರು. ಸಾಮಾನ್ಯವಾಗಿ ಹಲವು ವರ್ಷಗಳನ್ನು ತೆಗೆದುಕೊಳ್ಳುವ ಈ ವೃತ್ತಿಪರ ಅರ್ಹತೆಯನ್ನು ಅವರು ಸುಮಾರು ಒಂದು ವರ್ಷದ ಅವಧಿಯಲ್ಲೇ ಪೂರ್ಣಗೊಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ACCA ಬಳಿಕ CFA; ದುಬೈನಲ್ಲಿ ಸಂಶೋಧನಾ ವಿಶ್ಲೇಷಕರಾಗಿ ಕೆಲಸ
ACCAಯಲ್ಲೇ ತಮ್ಮ ಪಯಣವನ್ನು ನಿಲ್ಲಿಸದ ಲಕ್ಷ್ಮಣನ್ ನಂತರ CFA ಅರ್ಹತೆಯನ್ನೂ ಪಡೆದುಕೊಂಡಿದ್ದಾರೆ. ಸದ್ಯ ಅವರು ಫೈನಾನ್ಸ್‌ನಲ್ಲಿ MSc ವ್ಯಾಸಂಗ ಮಾಡುತ್ತಿದ್ದಾರೆ.
ಶೈಕ್ಷಣಿಕ ಸಾಧನೆಯ ಜೊತೆಗೆ ದುಬೈನ Century Financial ಸಂಸ್ಥೆಯಲ್ಲಿ Senior Research Analyst ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಹೂಡಿಕೆ, ಹಣಕಾಸು ಮಾರುಕಟ್ಟೆ ಹಾಗೂ ಮಾರುಕಟ್ಟೆ ವಿಶ್ಲೇಷಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
ಮತ್ತಷ್ಟು ಓದಿ :
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ವಂಚನೆ ಆರೋಪ; ಪೊಲೀಸರಿಗೆ ದೂರು












1 thought on “16ರ ಹರೆಯದಲ್ಲೇ ವಿಶ್ವದ ಕಿರಿಯ ಪುರುಷ ಚಾರ್ಟರ್ಡ್ ಅಕೌಂಟೆಂಟ್; ಗಿನ್ನೆಸ್ ದಾಖಲೆ ಬರೆದ ಲಕ್ಷ್ಮಣನ್ ಮೇಯ್ಯಪ್ಪನ್”