---Advertisement---

ಬಂಟ್ವಾಳ ಶಾಲಾ ಬಸ್ ದುರಂತ : 5 ವರ್ಷದ ಚಿರಣ್ವಿಯ ಸಾವಿಗೆ ಕಣ್ಣೀರಾದ ಊರು – ‘ಇನ್ನೂ 20 ನಿಮಿಷದಲ್ಲಿ ಮನೆ ತಲುಪಬೇಕಿದ್ದ ಮಗು ಮರಳಿ ಬರಲಿಲ್ಲ’

drusti news logo
On: July 24, 2026
ಬಂಟ್ವಾಳ ಶಾಲಾ ಬಸ್ ದುರಂತದಲ್ಲಿ ಮೃತಪಟ್ಟ 5 ವರ್ಷದ ಚಿರಣ್ವಿ
---Advertisement---

ಬಂಟ್ವಾಳ: ಶಾಲೆಯ ಸಂಭ್ರಮದೊಂದಿಗೆ ಮನೆಗೆ ಮರಳುತ್ತಿದ್ದ ಪುಟ್ಟ ಕಂದಮ್ಮನ ಬದುಕು ಕೆಲವೇ ಕ್ಷಣಗಳಲ್ಲಿ ಅಂತ್ಯಗೊಂಡ ದಾರುಣ ಘಟನೆ ಬಂಟ್ವಾಳ ತಾಲೂಕಿನ ಬರಿಮಾರು ಸಮೀಪದ ಕಲ್ಲೆಟ್ಟಿ ಪ್ರದೇಶದಲ್ಲಿ ಜೂಲೈ 22 ರಂದು ನಡೆದಿತ್ತು. ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿಬಿದ್ದ ಪರಿಣಾಮ ಮೃತಪಟ್ಟ 5 ವರ್ಷದ ಚಿರಣ್ವಿ ನೆನಪಿನಲ್ಲಿ ಇದೀಗ ಇಡೀ ಗ್ರಾಮ ಕಣ್ಣೀರಿನಲ್ಲಿ ಮುಳುಗಿದೆ.

ಮೃತ ಬಾಲಕಿ ಬಿಳಿಯೂರು ಗ್ರಾಮದ ತೋಟ ನಿವಾಸಿಗಳಾದ ಚಂದ್ರಹಾಸ ಮತ್ತು ಅನಿತಾ ದಂಪತಿಯ ಏಕೈಕ ಪುತ್ರಿ ಚಿರಣ್ವಿ (5) ಎಂದು ಗುರುತಿಸಲಾಗಿದೆ. ಶಾಲೆಯಿಂದ ಮನೆಗೆ ಬಂದು ತಂದೆ-ತಾಯಿಯ ಮಡಿಲು ಸೇರಬೇಕಿದ್ದ ಮಗು ವಿಧಿಯ ಕ್ರೂರಾಟಕ್ಕೆ ಬಲಿಯಾಗಿದೆ.

ಘಟನೆಯಲ್ಲಿ ಪೆರಾಜೆ ಸಾದಿಕುಕ್ಕು ನಿವಾಸಿ ನಾಲ್ಕನೇ ತರಗತಿ ವಿದ್ಯಾರ್ಥಿನಿ ಅನ್ವಿ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಗೆ ಎರಡೂ ಕಾಲು ಹಾಗೂ ಒಂದು ಕೈಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಇನ್ನೊಬ್ಬ ವಿದ್ಯಾರ್ಥಿನಿ ಕ್ಷಿತಿ ರೈ ಗಾಯಗೊಂಡಿದ್ದರೂ ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ.

ಅನ್ವಿ ಮತ್ತು ಆಕೆಯ ಅಕ್ಕ ಮೋಕ್ಷಾ ಶ್ರೀರಾಮ ವಿದ್ಯಾಕೇಂದ್ರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅಪಘಾತ ಸಂಭವಿಸಿದ ವೇಳೆ ಮೋಕ್ಷಾ ಬಸ್‌ನ ಹಿಂಭಾಗದಲ್ಲಿ ಕುಳಿತಿದ್ದ ಕಾರಣ ಯಾವುದೇ ಗಾಯವಾಗದೆ ಪಾರಾಗಿದ್ದಾರೆ.

ಆದರೆ ಮುಂಭಾಗದಲ್ಲಿ ಕುಳಿತಿದ್ದ ಅನ್ವಿಯ ಮಡಿಲಲ್ಲೇ ಚಿರಣ್ವಿ ಇದ್ದಳು. ಮರ ಬಿದ್ದ ರಭಸಕ್ಕೆ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದು, ಚಿರಣ್ವಿಯನ್ನು ಉಳಿಸಲು ಸಾಧ್ಯವಾಗಲಿಲ್ಲ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನ್ವಿ ಇನ್ನೂ ತನ್ನೊಂದಿಗೆ ಬಸ್‌ನಲ್ಲಿ ಇದ್ದ ಚಿರಣ್ವಿಯನ್ನೇ ನೆನೆದು ಅಳುತ್ತಿದ್ದು, “ಚಿರಣ್ವಿ ಎಲ್ಲಿದ್ದಾಳೆ?” ಎಂದು ಪದೇ ಪದೇ ಕೇಳುತ್ತಿರುವುದು ಕುಟುಂಬದವರ ಕಣ್ಣೀರು ತರಿಸಿದೆ.

ಕೆಲವೇ ಕ್ಷಣಗಳ ಹಿಂದೆ ನಗುತ್ತಾ ಮಾತನಾಡುತ್ತಿದ್ದ ಗೆಳತಿ ಮತ್ತೆ ಕಾಣಿಸಿಕೊಳ್ಳದಿರುವ ಆಘಾತದಿಂದ ಮಗು ಇನ್ನೂ ಹೊರಬರಲು ಸಾಧ್ಯವಾಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಚಿರಣ್ವಿ ಕುಟುಂಬದ ಏಕೈಕ ಮಗಳಾಗಿದ್ದಳು. ತಾಯಿ ಅನಿತಾ ಪ್ರಸ್ತುತ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ತಂದೆ ಚಂದ್ರಹಾಸ ಇತ್ತೀಚೆಗಷ್ಟೇ ತಮ್ಮ ಎಲೆಕ್ಟ್ರಾನಿಕ್ಸ್ ಅಂಗಡಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ ಹೊಸ ಆರಂಭ ಮಾಡಿದ್ದರು. ಇಂತಹ ಸಂದರ್ಭದಲ್ಲಿ ಮನೆಯ ಮುದ್ದು ಮಗುವನ್ನು ಕಳೆದುಕೊಂಡಿರುವುದು ಕುಟುಂಬಕ್ಕೆ ಭರಿಸಲಾಗದ ನೋವಾಗಿದೆ.

ಸ್ಥಳೀಯರು ಸಹ ಗರ್ಭಿಣಿ ತಾಯಿಯ ಪರಿಸ್ಥಿತಿ ನೋಡಿ ಕಣ್ಣೀರಾಗಿದ್ದಾರೆ.

ಶಾಲಾ ಬಸ್ ಚಾಲಕ ಉಮೇಶ್ ಘಟನೆ ಕುರಿತು ಮಾತನಾಡುತ್ತಾ, ಮರ ಬೀಳುವ ಯಾವುದೇ ಮುನ್ಸೂಚನೆ ಇರಲಿಲ್ಲ ಎಂದು ತಿಳಿಸಿದ್ದಾರೆ.

ಅವರ ಪ್ರಕಾರ, ಏಕಾಏಕಿ ಬಲವಾದ ಗಾಳಿ ಬೀಸಿದ ಪರಿಣಾಮ ಬೃಹತ್ ಮರ ಬಸ್ ಮೇಲೆ ಉರುಳಿಬಿದ್ದಿದೆ. ಮರ ರಸ್ತೆ ಬದಿಯಲ್ಲಿರದೆ ಸ್ವಲ್ಪ ದೂರದಲ್ಲಿದ್ದರೂ ಅದರ ಎತ್ತರದ ಕಾರಣ ಬಸ್‌ವರೆಗೆ ಬಿದ್ದಿದೆ ಎಂದು ಅವರು ಹೇಳಿದ್ದಾರೆ.

ಅಪಘಾತ ಸಂಭವಿಸುವ ವೇಳೆಗೆ ಬಸ್‌ನಲ್ಲಿ ಸುಮಾರು 15 ಮಕ್ಕಳು ಇದ್ದರು ಎಂದು ಮಾಹಿತಿ ನೀಡಿದ್ದಾರೆ.

ಅಪಘಾತ ಸಂಭವಿಸಿದ ಸ್ಥಳದಿಂದ ಚಿರಣ್ವಿಯ ಮನೆಗೆ ಇನ್ನೂ ನಾಲ್ಕೈದು ಕಿಲೋಮೀಟರ್ ದೂರ ಮಾತ್ರ ಉಳಿದಿತ್ತು. ಇನ್ನೇನು 20 ನಿಮಿಷಗಳಲ್ಲಿ ತಂದೆ-ತಾಯಿಯ ಮಡಿಲು ಸೇರಬೇಕಿದ್ದ ಪುಟ್ಟ ಮಗು ಜೀವಂತವಾಗಿ ಮನೆ ತಲುಪಲಿಲ್ಲ ಎಂಬ ಸಂಗತಿ ಗ್ರಾಮಸ್ಥರ ಮನಕಲಕುತ್ತಿದೆ.

ಘಟನೆಯ ಹಿನ್ನೆಲೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಆಡಳಿತ ಮಂಡಳಿಯ ತುರ್ತು ಸಭೆ ನಡೆಯಿತು. ಸಂಸ್ಥೆಯ ಪ್ರಮುಖರು, ಶಿಕ್ಷಕರು ಹಾಗೂ ಸಿಬ್ಬಂದಿ ಚಿರಣ್ವಿಗೆ ಶ್ರದ್ಧಾಂಜಲಿ ಸಲ್ಲಿಸಿ, ಗಾಯಗೊಂಡ ವಿದ್ಯಾರ್ಥಿಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.

ಇದೇ ವೇಳೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಘಟನೆಯ ಮಾಹಿತಿ ಸಂಗ್ರಹಿಸಿದರು.


ಮತ್ತಷ್ಟು ಓದಿ :

ಐಫೋನ್ ಆರ್ಡರ್ ಮಾಡಿದ ಗ್ರಾಹಕನಿಗೆ ಬಂದಿದ್ದು ಬಿಯರ್ಡ್ ಆಯಿಲ್! ₹1.11 ಲಕ್ಷ ಮರುಪಾವತಿಗೆ ಫ್ಲಿಪ್‌ಕಾರ್ಟ್‌ಗೆ ನ್ಯಾಯಾಲಯದ ಆದೇಶ

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

Leave a Comment