ತಮಿಳುನಾಡಿನ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದ ಬೆಳವಣಿಗೆಗಳು ಕರ್ನಾಟಕದಲ್ಲಿಯೂ ಸದಾ ವಿಶೇಷ ಗಮನ ಸೆಳೆಯುತ್ತವೆ. ಅದರಲ್ಲೂ ಚಿತ್ರರಂಗದಿಂದ ರಾಜಕೀಯಕ್ಕೆ ಬಂದ ದಳಪತಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರ ಪ್ರತಿಯೊಂದು ಹೆಜ್ಜೆಯೂ ಸುದ್ದಿಯಾಗುತ್ತಿದೆ. ಇದೀಗ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಕೇವಲ ಒಂದು ತಿಂಗಳಲ್ಲೇ ಅವರು ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿಯೂ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಜೋಸೆಫ್ ವಿಜಯ್, ಮುಖ್ಯಮಂತ್ರಿ ಆದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಆದರೆ ಈ ಭೇಟಿ ರಾಜಕೀಯ ಅಥವಾ ಆಡಳಿತಾತ್ಮಕ ಕಾರ್ಯಕ್ರಮಕ್ಕಾಗಿ ಅಲ್ಲ. ಬದಲಾಗಿ ಶಕ್ತಿದೇವತೆ ಮೂಕಾಂಬಿಕೆಯ ದರ್ಶನ ಹಾಗೂ ವಿಶೇಷ ಪೂಜೆಗಾಗಿ ಎಂಬುದು ವಿಶೇಷ. ಇದನ್ನು ಓದಿ : ಜೂನ್ 12 ರಂದು ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ
ಸಿಎಂ ಆದ ಬಳಿಕ ಮೊದಲ ದೇವಾಲಯ ಭೇಟಿ
ಮೇ 10ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿಜಯ್ ಆಡಳಿತ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಹಲವು ಬಾರಿ ದೆಹಲಿ ಪ್ರವಾಸ ಕೈಗೊಂಡಿದ್ದರೂ, ದೇವಸ್ಥಾನಗಳಿಗೆ ಭೇಟಿ ನೀಡಿರಲಿಲ್ಲ. ಇದೀಗ ಅಧಿಕಾರ ಸ್ವೀಕರಿಸಿದ ಒಂದು ತಿಂಗಳೊಳಗೆ ಶಕ್ತಿ ಆರಾಧನೆಗೆ ಮಹತ್ವದ ದಿನವೆಂದು ಪರಿಗಣಿಸಲ್ಪಡುವ ಶುಕ್ರವಾರದಂದು ಮೂಕಾಂಬಿಕಾ ಸನ್ನಿಧಿಗೆ ಆಗಮಿಸುತ್ತಿರುವುದು ರಾಜಕೀಯ ಹಾಗೂ ಭಕ್ತವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಚುನಾವಣಾ ಫಲಿತಾಂಶಕ್ಕೂ ಮುನ್ನ ವಿಜಯ್ ತಿರುಚೆಂದೂರಿನ ಮುರುಗನ್ ದೇವಾಲಯ ಹಾಗೂ ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಆದರೆ ಮುಖ್ಯಮಂತ್ರಿ ಆದ ಬಳಿಕ ಇದು ಅವರ ಮೊದಲ ದೇವಾಲಯ ಭೇಟಿ ಎನ್ನಲಾಗುತ್ತಿದೆ.
ವಿಜಯ್ ಅವರ ಭೇಟಿ ವೇಳಾಪಟ್ಟಿ
ಲಭ್ಯ ಮಾಹಿತಿಯಂತೆ, ವಿಜಯ್ ಮಧ್ಯಾಹ್ನ 12:30ಕ್ಕೆ ಚೆನ್ನೈನಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಂತರ ಮಧ್ಯಾಹ್ನ 3 ಗಂಟೆಗೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಪೂಜೆ ಬಳಿಕ ಸಂಜೆ ಮಂಗಳೂರು ಮಾರ್ಗವಾಗಿ ಮತ್ತೆ ಚೆನ್ನೈಗೆ ವಾಪಸ್ಸಾಗಲಿದ್ದಾರೆ.
ಮುಖ್ಯಮಂತ್ರಿಯ ಭೇಟಿ ಹಿನ್ನೆಲೆಯಲ್ಲಿ ಕೊಲ್ಲೂರಿನಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸುವಂತೆ ಹಿರಿಯ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ತಮಿಳುನಾಡಿನ ನಾಯಕರಿಗೂ ಕೊಲ್ಲೂರಿಗೂ ವಿಶೇಷ ನಂಟು
ವಿಜಯ್ ಅವರ ಈ ಭೇಟಿ ಕೇವಲ ಧಾರ್ಮಿಕ ಕಾರ್ಯಕ್ರಮವಷ್ಟೇ ಅಲ್ಲ. ತಮಿಳುನಾಡಿನ ಹಲವು ಪ್ರಮುಖ ರಾಜಕೀಯ ನಾಯಕರಿಗೂ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೂ ದೀರ್ಘಕಾಲದ ಸಂಬಂಧವಿದೆ. ಈ ಹಿನ್ನೆಲೆಯಲ್ಲೇ ವಿಜಯ್ ಅವರ ಆಗಮನ ತಮಿಳುನಾಡಿನಲ್ಲಿಯೂ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಎಂಜಿಆರ್ ಅರ್ಪಿಸಿದ್ದ ಒಂದು ಕೆಜಿ ಚಿನ್ನದ ಖಡ್ಗ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ದಂತಕಥೆ ನಟ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಮೂಕಾಂಬಿಕಾ ದೇವಿಯ ಭಕ್ತರಾಗಿದ್ದರು. ತಮ್ಮ ಆಡಳಿತಾವಧಿಯಲ್ಲಿ ಅವರು ಅನೇಕ ಬಾರಿ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಅವರ ಭಕ್ತಿಗೆ ಸಾಕ್ಷಿಯಾಗಿ ಇಂದಿಗೂ ದೇವಸ್ಥಾನದಲ್ಲಿ ದೇವಿಗೆ ಅರ್ಪಿಸಲಾದ ಒಂದು ಕೆಜಿ ತೂಕದ ಚಿನ್ನದ ಖಡ್ಗ ಇದೆ. ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಎಂಜಿಆರ್ ಈ ಅಮೂಲ್ಯ ಕಾಣಿಕೆಯನ್ನು ಮೂಕಾಂಬಿಕಾ ದೇವಿಗೆ ಸಮರ್ಪಿಸಿದ್ದರು. ಇದರಿಂದ ಕೊಲ್ಲೂರು ಕ್ಷೇತ್ರದೊಂದಿಗೆ ಅವರ ನಂಟು ಮತ್ತಷ್ಟು ಗಾಢವಾಗಿತ್ತು.
ಜಯಲಲಿತಾ ನಡೆಸಿದ್ದ ಚಂಡಿಕಾ ಹೋಮ
ಎಂಜಿಆರ್ ಅವರ ಉತ್ತರಾಧಿಕಾರಿ ಹಾಗೂ ಮಾಜಿ ಮುಖ್ಯಮಂತ್ರಿ ಜಯಲಲಿತಾ ಕೂಡ ಕೊಲ್ಲೂರು ಮೂಕಾಂಬಿಕೆ ದೇವಿಯ ಭಕ್ತೆಯಾಗಿದ್ದರು. ರಾಜಕೀಯ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದ ಅವರು, 2004ರಲ್ಲಿ ಜ್ಯೋತಿಷಿಯ ಸಲಹೆಯ ಮೇರೆಗೆ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಅಂದು ಅವರು ದೇವಿಗೆ ಪ್ರಿಯವಾದ ಚಂಡಿಕಾ ಹೋಮ ನಡೆಸಿಸಿದ್ದರು. ಜೊತೆಗೆ ಶುಕ್ರವಾರದ ವಿಶೇಷ ಅನ್ನಸಂತರ್ಪಣೆಗೆ 30 ಸಾವಿರ ರೂಪಾಯಿ ದೇಣಿಗೆ ನೀಡಿದ್ದಲ್ಲದೆ, ಒಂದು ಟನ್ ತುಪ್ಪವನ್ನು ಸಮರ್ಪಿಸಿದ್ದರು.
ಅವರ ಆಡಳಿತಾವಧಿಯಲ್ಲೇ ತಮಿಳುನಾಡಿನ ವಿವಿಧ ನಗರಗಳಿಂದ ಕೊಲ್ಲೂರಿಗೆ ನೇರ ಸರ್ಕಾರಿ ಬಸ್ ಸೇವೆಗಳ ವ್ಯವಸ್ಥೆಯೂ ಕಲ್ಪಿಸಲಾಗಿತ್ತು. ಜಯಲಲಿತಾ ಭೇಟಿ ಬಳಿಕ ತಮಿಳುನಾಡಿನಲ್ಲಿ ಮೂಕಾಂಬಿಕಾ ಕ್ಷೇತ್ರದ ಖ್ಯಾತಿ ಮತ್ತಷ್ಟು ಹೆಚ್ಚಾಗಿದ್ದು, ಭಕ್ತರ ಸಂಖ್ಯೆಯಲ್ಲೂ ಗಮನಾರ್ಹ ಏರಿಕೆ ಕಂಡುಬಂದಿತ್ತು.
ಮುಂದುವರಿಯುತ್ತಿರುವ ಐತಿಹಾಸಿಕ ಪರಂಪರೆ
ಎಂಜಿಆರ್ ಹಾಗೂ ಜಯಲಲಿತಾ ಬಳಿಕ ಇದೀಗ ತಮಿಳುನಾಡಿನ ಹೊಸ ಮುಖ್ಯಮಂತ್ರಿ ಜೋಸೆಫ್ ವಿಜಯ್ ಕೂಡ ಮೂಕಾಂಬಿಕಾ ಸನ್ನಿಧಿಗೆ ಭೇಟಿ ನೀಡುತ್ತಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ. ತಮಿಳುನಾಡಿನ ರಾಜಕೀಯ ನಾಯಕರು ಹಾಗೂ ಕೊಲ್ಲೂರು ಕ್ಷೇತ್ರದ ನಡುವೆ ವರ್ಷಗಳಿಂದ ಬೆಸೆದುಕೊಂಡಿರುವ ಆಧ್ಯಾತ್ಮಿಕ ನಂಟಿನ ಮತ್ತೊಂದು ಅಧ್ಯಾಯವಾಗಿ ಈ ಭೇಟಿ ಕಾಣಲಾಗುತ್ತಿದೆ.
ಮತ್ತಷ್ಟು ಓದಿ :
ಫ್ಲ್ಯಾಟ್, ಕಾರು, ಚಿನ್ನದ ಆಮಿಷ ; ಲಕ್ಕಿ ಸ್ಕೀಮ್ ಹೆಸರಿನಲ್ಲಿ ಕೋಟ್ಯಂತರ ವಂಚನೆ!













1 thought on “ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ತಮಿಳುನಾಡು ಸಿಎಂ ವಿಜಯ್ ಭೇಟಿ : ಎಂಜಿಆರ್, ಜಯಲಲಿತಾ ಬಳಿಕ ಮತ್ತೊಮ್ಮೆ ಮೂಡಿದ ಐತಿಹಾಸಿಕ ನಂಟು”