ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರಗಳಿಗೆ ಹರಿದು ಬಂದಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಸೂರ್ಯದ ಶ್ರೀ ಸದಾಶಿವ ರುದ್ರ ದೇವಸ್ಥಾನ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ, ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಉಡುಪಿ ಶ್ರೀಕೃಷ್ಣ ಮಠ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿ ಕಂಡುಬಂದಿದೆ.
ಬೆಳಗ್ಗಿನಿಂದಲೇ ದೇವಾಲಯಗಳ ಪ್ರವೇಶ ದ್ವಾರಗಳಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಕುಟುಂಬ ಸಮೇತರಾಗಿ ಆಗಮಿಸಿದ ಅನೇಕರು ವಿಶೇಷ ಪೂಜೆಗಳು ಹಾಗೂ ಸೇವೆಗಳಲ್ಲಿ ಪಾಲ್ಗೊಂಡು ತಮ್ಮ ಹರಕೆಗಳನ್ನು ಸಲ್ಲಿಸಿದರು. ರಜೆ ಇರುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳ ಜೊತೆಗೆ ಹೊರರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ ದಿನವಿಡೀ ಜನಸಂದಣಿ ಮುಂದುವರಿಯಿತು.
ದೇವಾಲಯಗಳ ಅನ್ನಸಂತರ್ಪಣಾ ಕೇಂದ್ರಗಳಲ್ಲಿಯೂ ಭಾರೀ ಸಂಖ್ಯೆಯಲ್ಲಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಳೆದ ಎರಡು ದಿನಗಳ ಅವಧಿಯಲ್ಲಿ 75 ಸಾವಿರಕ್ಕೂ ಅಧಿಕ ಭಕ್ತರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಅನ್ನಪ್ರಸಾದ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ.
ಧರ್ಮಸ್ಥಳ, ಉಜಿರೆ ಹಾಗೂ ಕನ್ಯಾಡಿ ಭಾಗಗಳಲ್ಲಿರುವ ಲಾಡ್ಜ್‌ಗಳು ಮತ್ತು ವಸತಿ ಸೌಲಭ್ಯಗಳು ಸಂಪೂರ್ಣ ಭರ್ತಿಯಾಗಿದ್ದವು. ಕೊಠಡಿಗಳ ಬೇಡಿಕೆ ಹೆಚ್ಚಿದ ಪರಿಣಾಮ ಮುಂಗಡ ಕಾಯ್ದಿರಿಸದವರಿಗೆ ವಸತಿ ದೊರಕುವುದು ಕಷ್ಟಕರವಾಗಿತ್ತು. ಇದರಿಂದ ಕೆಲವರು ಸಮೀಪದ ಪ್ರದೇಶಗಳಲ್ಲಿ ಪರ್ಯಾಯ ವಸತಿ ವ್ಯವಸ್ಥೆಗಳನ್ನು ಹುಡುಕಿಕೊಂಡರು.
ಭಕ್ತರ ಸಂಖ್ಯೆಯ ಹೆಚ್ಚಳದಿಂದ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿಯೂ ವಾಹನಗಳ ಸಂಚಾರ ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿ ಕಂಡುಬಂತು. ವಿವಿಧ ಜಿಲ್ಲೆಗಳಿಂದ ಸಂಚರಿಸಿದ ಕೆಎಸ್‌ಆರ್‌ಟಿಸಿ ಬಸ್‌ಗಳು ಬಹುತೇಕ ಸಂಪೂರ್ಣ ಭರ್ತಿಯಾಗಿ ಓಡಾಡಿದವು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಾತ್ರವೇ 40 ಸಾವಿರಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದಿದ್ದಾರೆ. ದೇವಾಲಯದ ಎಲ್ಲಾ ವಸತಿಗೃಹಗಳು ಭರ್ತಿಯಾಗಿದ್ದರೆ, ಖಾಸಗಿ ಲಾಡ್ಜ್‌ಗಳಲ್ಲಿಯೂ ಖಾಲಿ ಕೊಠಡಿಗಳು ಲಭ್ಯವಿರಲಿಲ್ಲ.
ಕುಕ್ಕೆ ದೇವಸ್ಥಾನದ ಸುತ್ತಮುತ್ತ ಹಾಗೂ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯ ಪಾರ್ಕಿಂಗ್ ಸ್ಥಳಗಳು ವಾಹನಗಳಿಂದ ತುಂಬಿ ತುಳುಕಿದವು. ವಾಹನ ನಿಲುಗಡೆಗೆ ಸ್ಥಳಾವಕಾಶದ ಕೊರತೆಯಿಂದ ಅನೇಕರು ರಸ್ತೆ ಬದಿಗಳಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕಾಯಿತು. ಇದರಿಂದ ಕೆಲವೆಡೆ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಪೊಲೀಸರು ಮತ್ತು ಸಂಬಂಧಿತ ಸಿಬ್ಬಂದಿ ವಿಶೇಷ ಕ್ರಮ ಕೈಗೊಂಡರು.
ಸಾಲು ಸಾಲು ರಜೆಗಳ ಪರಿಣಾಮ ಈ ಎಲ್ಲಾ ಪುಣ್ಯಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಜನಸಂದಣಿ ಮುಂದುವರಿಯುವ ಸಾಧ್ಯತೆ ಇದೆ.
ಮತ್ತಷ್ಟು ಓದಿ :
ನಾಟೆಕಲ್ ಬಳಿ ಭೀಕರ ರಸ್ತೆ ಅಪಘಾತ : ಇನ್ಫೋಸಿಸ್ ಉದ್ಯೋಗಿ ಮೃತ, ಸಹೋದ್ಯೋಗಿಗೆ ಗಾಯ
ಕಾರವಾರದಲ್ಲಿ ಅಗ್ನಿ ಅವಘಡ : ಮನೆಯಲ್ಲಿ ಸಂಗ್ರಹಿಸಿದ್ದ 70ಕ್ಕೂ ಹೆಚ್ಚು ಅಡಿಕೆ ಚೀಲಗಳು ಭಸ್ಮ









