Karnataka EV Tax 2026 : ಜೀವಿತಾವಧಿ ತೆರಿಗೆ ವಿನಾಯಿತಿ ರದ್ದು – ಯಾವ ವಾಹನಕ್ಕೆ ಎಷ್ಟು ತೆರಿಗೆ?
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬಳಕೆ ವೇಗವಾಗಿ ಹೆಚ್ಚುತ್ತಿರುವ ನಡುವೆಯೇ, ದುಬಾರಿ EV ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ರಾಜ್ಯ ಸರ್ಕಾರ ಮಹತ್ವದ ಬದಲಾವಣೆಯೊಂದನ್ನು ಘೋಷಿಸಿದೆ. ಹಲವು ವರ್ಷಗಳಿಂದ ಜಾರಿಯಲ್ಲಿದ್ದ ಜೀವಿತಾವಧಿ ರಸ್ತೆ ತೆರಿಗೆ ವಿನಾಯಿತಿಯನ್ನು ಸರ್ಕಾರ ಹಿಂಪಡೆದಿದ್ದು, ಇನ್ನು ಮುಂದೆ 10 ಲಕ್ಷ ರೂಪಾಯಿಗಿಂತ ಹೆಚ್ಚು ಮೌಲ್ಯದ ವಿದ್ಯುತ್ ಚಾಲಿತ ನಾಲ್ಕು ಚಕ್ರದ ವಾಹನಗಳಿಗೆ ತೆರಿಗೆ ಪಾವತಿಸಬೇಕಾಗುತ್ತದೆ.
EV ಬಳಕೆಗೆ ಉತ್ತೇಜನ ನೀಡಿದ್ದ ತೆರಿಗೆ ವಿನಾಯಿತಿ
ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2016ರಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಶೂನ್ಯ ರಸ್ತೆ ತೆರಿಗೆ ನೀತಿಯನ್ನು ಜಾರಿಗೊಳಿಸಿತ್ತು. ಅದರ ಬೆನ್ನಲ್ಲೇ ಕರ್ನಾಟಕದಲ್ಲೂ EV ವಾಹನಗಳ ಖರೀದಿಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು.
ಈ ಕ್ರಮದಿಂದಾಗಿ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಗಮನಾರ್ಹವಾಗಿ ಏರಿಕೆಯಾಯಿತು. ಆರಂಭದಲ್ಲಿ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ EV ವಾಹನಗಳು ಈಗ ಗ್ರಾಮೀಣ ಭಾಗಗಳಿಗೂ ವ್ಯಾಪಕವಾಗಿ ಹರಡಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ, ಕಡಿಮೆ ನಿರ್ವಹಣಾ ವೆಚ್ಚ, ಪರಿಸರ ಸಂರಕ್ಷಣೆ ಹಾಗೂ ಸರ್ಕಾರದ ಪ್ರೋತ್ಸಾಹಕ ನೀತಿಗಳು ಜನರನ್ನು EV ವಾಹನಗಳತ್ತ ಸೆಳೆದ ಪ್ರಮುಖ ಕಾರಣಗಳಾಗಿವೆ.
ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಸುಮಾರು ಶೇ.22ರಷ್ಟು ಏರಿಕೆ ದಾಖಲಾಗಿರುವುದು ಈ ಕ್ಷೇತ್ರದ ಬೆಳವಣಿಗೆಯನ್ನು ಸ್ಪಷ್ಟಪಡಿಸುತ್ತದೆ.
ಯಾವ EV ವಾಹನಕ್ಕೆ ಎಷ್ಟು ತೆರಿಗೆ?
| ವಾಹನದ ಮೌಲ್ಯ | ಜೀವಿತಾವಧಿ ತೆರಿಗೆ |
| ₹10 ಲಕ್ಷದವರೆಗೆ | 5% |
| ₹10 ಲಕ್ಷದಿಂದ ₹25 ಲಕ್ಷದವರೆಗೆ | 8% |
| ₹25 ಲಕ್ಷಕ್ಕಿಂತ ಹೆಚ್ಚು | 10% |
ದ್ವಿಚಕ್ರ EV ವಾಹನಗಳಿಗೆ ಯಾವುದೇ ಬದಲಾವಣೆ ಇಲ್ಲ
ಹೊಸ ನಿಯಮದ ಅಡಿಯಲ್ಲಿ ಎಲೆಕ್ಟ್ರಿಕ್ ಬೈಕ್‌ಗಳು, ಸ್ಕೂಟರ್‌ಗಳು ಸೇರಿದಂತೆ ದ್ವಿಚಕ್ರ EV ವಾಹನಗಳಿಗೆ ಜೀವಿತಾವಧಿ ತೆರಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಈ ವಿಭಾಗದ ಗ್ರಾಹಕರು ಹಿಂದಿನಂತೆಯೇ ತೆರಿಗೆ ವಿನಾಯಿತಿಯ ಪ್ರಯೋಜನ ಪಡೆಯಲಿದ್ದಾರೆ.
ಸಾರಿಗೆ ಇಲಾಖೆಗೆ ವರ್ಷಕ್ಕೆ ₹259 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷೆ
ಇ-ವಾಹನಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುತ್ತಿರುವುದರಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತಿದೆ ಎಂಬ ಕಾರಣದಿಂದ ಸಾರಿಗೆ ಇಲಾಖೆ ಈ ಹಿಂದೆಯೇ ತೆರಿಗೆ ವಿಧಿಸಲು ಪ್ರಸ್ತಾವ ಸಲ್ಲಿಸಿತ್ತು. ಆರಂಭಿಕ ಹಂತದಲ್ಲಿ ಎಲ್ಲಾ EV ವಾಹನಗಳಿಗೆ ಜೀವಿತಾವಧಿ ತೆರಿಗೆ ವಿಧಿಸುವ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಸರ್ಕಾರ ಅದನ್ನು ತಿರಸ್ಕರಿಸಿತ್ತು. ನಂತರ 2024ರಲ್ಲಿ 20 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ EV ವಾಹನಗಳಿಗೆ ಶೇ.18ರಷ್ಟು ತೆರಿಗೆ ವಿಧಿಸುವಂತೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆ ವೇಳೆ 25 ಲಕ್ಷ ರೂ. ಮೇಲ್ಪಟ್ಟ ವಾಹನಗಳಿಗೆ ಮಾತ್ರ ತೆರಿಗೆ ವಿಧಿಸಲು ಸರ್ಕಾರ ಒಪ್ಪಿಗೆ ನೀಡಿತ್ತು.
ಆದರೆ ಇದೀಗ ‘ಕರ್ನಾಟಕ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ವಿಧೇಯಕ-2026’ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ 10 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ವಿದ್ಯುತ್ ಚಾಲಿತ ನಾಲ್ಕು ಚಕ್ರದ ವಾಹನಗಳ ಮೇಲೆ ಜೀವಿತಾವಧಿ ತೆರಿಗೆ ವಿಧಿಸುವ ನಿರ್ಧಾರ ಅಂತಿಮಗೊಂಡಿದೆ. ಸಾರಿಗೆ ಇಲಾಖೆಯ ಅಂದಾಜಿನ ಪ್ರಕಾರ ಈ ಹೊಸ ತೆರಿಗೆ ವ್ಯವಸ್ಥೆಯಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು ₹259 ಕೋಟಿ ಹೆಚ್ಚುವರಿ ಆದಾಯ ಲಭಿಸುವ ನಿರೀಕ್ಷೆಯಿದೆ.
EV ಮಾರಾಟದಲ್ಲಿ ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿರುವ ಕರ್ನಾಟಕ
ಎಲೆಕ್ಟ್ರಿಕ್ ವಾಹನಗಳ ಮಾರಾಟ ಮತ್ತು ನೋಂದಣಿ ವಿಚಾರದಲ್ಲಿ ಕರ್ನಾಟಕ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರ ಕರ್ನಾಟಕವು ಭಾರತದಲ್ಲಿನ ನಾಲ್ಕನೇ ಅತಿದೊಡ್ಡ EV ಮಾರುಕಟ್ಟೆಯಾಗಿ ಗುರುತಿಸಿಕೊಂಡಿದೆ.
ರಾಷ್ಟ್ರೀಯ ಮಟ್ಟದಲ್ಲಿ ಎಲೆಕ್ಟ್ರಿಕ್ ವಾಹನಗಳ ವಾರ್ಷಿಕ ಮಾರಾಟದ ಸರಾಸರಿ ಶೇ.8.21ರಷ್ಟಿದ್ದರೆ, ಕರ್ನಾಟಕದಲ್ಲಿ ಈ ಪ್ರಮಾಣ ಶೇ.10.88ರಷ್ಟಿದೆ. ಸಾರಿಗೆ ಇಲಾಖೆಯ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಸದ್ಯ ಸುಮಾರು 7.50 ಲಕ್ಷ ಎಲೆಕ್ಟ್ರಿಕ್ ವಾಹನಗಳು ಸಂಚರಿಸುತ್ತಿವೆ.
ಇಂತಹ ಸಂದರ್ಭದಲ್ಲಿ ಸರ್ಕಾರ ತೆರಿಗೆ ವಿನಾಯಿತಿಯನ್ನು ಹಂತ ಹಂತವಾಗಿ ಹಿಂಪಡೆಯುವ ನಿರ್ಧಾರ ಕೈಗೊಂಡಿರುವುದು EV ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಮತ್ತಷ್ಟು ಓದಿ :
Ola, Uberಗೆ ಹೊಸ ಸವಾಲು! ಭಾರತಕ್ಕೆ ಎಂಟ್ರಿ ಕೊಟ್ಟ Green SM; ಶೀಘ್ರದಲ್ಲೇ ಬೆಂಗಳೂರಿಗೂ ಸೇವೆ?
ದೇಶದಲ್ಲಿ E85 ಇಂಧನ ಬಳಕೆಗೆ ಚಾಲನೆ; ಪರಿಸರ ಸ್ನೇಹಿ ಇಂಧನದತ್ತ ಮತ್ತೊಂದು ಹೆಜ್ಜೆ












