ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ (Congress Guarantee) ದುರುಪಯೋಗಕ್ಕೆ ಬ್ರೇಕ್ ಹಾಕಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಗ್ಯಾರಂಟಿ ಯೋಜನೆಗಳ ವ್ಯವಸ್ಥಿತ ಪರಿಷ್ಕರಣೆಗೆ ಮುಂದಾಗಿರುವ ಸರ್ಕಾರ, ಅರ್ಹ ಫಲಾನುಭವಿಗಳನ್ನು ಗುರುತಿಸಲು ಹೊಸ ನಿಯಮಾವಳಿಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಇನ್ಮುಂದೆ ಗ್ಯಾರಂಟಿ ಸೌಲಭ್ಯ ಮುಂದುವರಿಯಬೇಕಾದರೆ ಆಧಾರ್ ಕಾರ್ಡ್ ಮಾತ್ರವಲ್ಲದೆ, ಮತದಾರರ ಗುರುತಿನ ಚೀಟಿ (Voter ID) ಹೊಂದುವುದು ಕಡ್ಡಾಯವಾಗಲಿದೆ. ಈ ಮೂಲಕ ಅನರ್ಹರಿಗೆ ಕೋಕ್ ನೀಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.
ಮನೆ ಬಾಗಿಲಿಗೆ ಬರಲಿದ್ದಾರೆ ಅಧಿಕಾರಿಗಳು: ರೀ-ವೇರಿಫಿಕೇಶನ್ ಪ್ರಕ್ರಿಯೆ ಶುರು!
ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆ (Re-verification) ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಇತ್ತೀಚೆಗೆ ಮಹತ್ವದ ಉನ್ನತ ಮಟ್ಟದ ಸಭೆ ನಡೆದಿದ್ದು, ಈ ಸಭೆಯಲ್ಲಿ ಗಂಭೀರ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಯೋಜನೆಗಳ ದುರುಪಯೋಗ ತಡೆಯಲು ಫಲಾನುಭವಿಗಳು ಇನ್ಮುಂದೆ ಹೊಸದಾಗಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಇದಕ್ಕಾಗಿ ಸರ್ಕಾರ ವಿಶೇಷ ಅಧಿಕಾರಿಗಳ ತಂಡವನ್ನು ನಿಯೋಜಿಸಲಿದ್ದು, ಈ ಅಧಿಕಾರಿಗಳು ಹೊಸ ಪರಿಶೀಲನಾ ಫಾರ್ಮ್‌ಗಳೊಂದಿಗೆ ನೇರವಾಗಿ ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ವಿಶೇಷವಾಗಿ ‘ಗೃಹಲಕ್ಷ್ಮಿ’ ಮತ್ತು ‘ಗೃಹಜ್ಯೋತಿ’ ಯೋಜನೆಗಳ ಫಲಾನುಭವಿಗಳ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಸರ್ಕಾರ ನಿರ್ಧರಿಸಿದ್ದು, ಪರಿಶೀಲನೆ ವೇಳೆ ಆಧಾರ್, ವೋಟರ್ ಐಡಿ ಜೊತೆಗೆ ರೇಷನ್ ಕಾರ್ಡ್ (Ration Card) ನೀಡುವುದೂ ಕೂಡ ಕಡ್ಡಾಯವಾಗಿರಲಿದೆ.
ರಾಜ್ಯದ ಜನರಿಗಷ್ಟೇ ಸೌಲಭ್ಯ: ವೋಟರ್ ಐಡಿ ಅಸ್ತ್ರಕ್ಕೆ ಕಾರಣವೇನು?
ಹೊರ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿರುವವರು ಅಥವಾ ಮತದಾನದ ಹಕ್ಕು ಇಲ್ಲದವರೂ ಗ್ಯಾರಂಟಿ ಲಾಭ ಪಡೆಯುತ್ತಿರುವುದನ್ನು ತಡೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಎಸ್‌ಐಆರ್ (SIR) ಪ್ರಕ್ರಿಯೆಯ ನಂತರ ಯಾರೆಲ್ಲಾ ಮತದಾನದ ಹಕ್ಕನ್ನು ಕಳೆದುಕೊಂಡಿರುತ್ತಾರೋ, ಅಂತಹವರಿಗೆ ಗ್ಯಾರಂಟಿ ಸೌಲಭ್ಯಗಳು ಕಟ್ ಆಗಲಿವೆ. ಮತದಾರರ ಪಟ್ಟಿಯಲ್ಲಿ (Voter List) ಕಡ್ಡಾಯವಾಗಿ ಹೆಸರು ಇರಬೇಕು ಮತ್ತು ಸಕ್ರಿಯ ವೋಟರ್ ಐಡಿ ಹೊಂದಿರಲೇಬೇಕು. ಈ ಮೂಲಕ ಕೇವಲ ಕರ್ನಾಟಕದ ಮೂಲ ನಿವಾಸಿಗಳಿಗೆ ಮಾತ್ರ ಯೋಜನೆಯ ಲಾಭ ಸಿಗುವಂತೆ ಮಾಡಲು ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.
ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್; ಬಸ್ ಟಿಕೆಟ್ ದರ ಏರಿಕೆಗೆ ಶಿಫಾರಸು?
ಇದೇ ವೇಳೆ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆಯಲ್ಲೂ ಪ್ರಮುಖ ಬದಲಾವಣೆಗಳು ಕಂಡುಬರುತ್ತಿವೆ. ಮಹಿಳೆಯರ ಉಚಿತ ಪ್ರಯಾಣಕ್ಕೆ ಇನ್ಮುಂದೆ ‘ಸ್ಮಾರ್ಟ್ ಕಾರ್ಡ್’ ವಿತರಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಇದರೊಂದಿಗೆ, ಸಾರಿಗೆ ಸಂಸ್ಥೆಗಳ ಆರ್ಥಿಕ ಹೊರೆಯನ್ನು ತಗ್ಗಿಸಲು ಗ್ಯಾರಂಟಿ ಅನುಷ್ಠಾನ ಸಮಿತಿಯು ಬಸ್ ಟಿಕೆಟ್ ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎನ್ನಲಾಗಿದೆ.
ಪ್ರಸ್ತುತ ಶಕ್ತಿ ಯೋಜನೆಯಿಂದಾಗಿ ರಾಜ್ಯ ಸಾರಿಗೆ ಇಲಾಖೆಗೆ ಬರೋಬ್ಬರಿ 5,173 ಕೋಟಿ ರೂಪಾಯಿಗಳ ಆದಾಯದ ಕೊರತೆ ಎದುರಾಗಿದ್ದು, ಈ ಬಾಕಿ ಮೊತ್ತವನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಸಾರಿಗೆ ನಿಗಮಗಳು ಸರ್ಕಾರಕ್ಕೆ ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ನಿಯಮಗಳ ಪರಿಷ್ಕರಣೆ ಹಾಗೂ ಸಾರಿಗೆ ಸಂಸ್ಥೆಗಳ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಮತ್ತಷ್ಟು ಓದಿ :
ಗೃಹಲಕ್ಷ್ಮಿ ಯೋಜನೆ (Gruhalaxmi Yojana) ಫಲಾನುಭವಿಗಳಿಗೆ ಮತ್ತೆ ಅರ್ಜಿ? ಸಿಎಂ ಸ್ಪಷ್ಟನೆ
ಗೃಹಲಕ್ಷ್ಮಿ ಯೋಜನೆಗೆ ಬಯೋಮೆಟ್ರಿಕ್ ಕಡ್ಡಾಯ? ದುರುಪಯೋಗ ತಡೆಗೆ ಸರ್ಕಾರದ ಮಹತ್ವದ ಕ್ರಮ













1 thought on “ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಸರ್ಕಾರದ ಹೈವೋಲ್ಟೇಜ್ ಪ್ಲಾನ್ : ಇನ್ಮುಂದೆ ಆಧಾರ್ ಜೊತೆ ‘ವೋಟರ್ ಐಡಿ’ ಕಡ್ಡಾಯ!”