ಮಂಗಳೂರು : ಪುತ್ತೂರಿನ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಪ್ರೀತಿಸಿ ವಂಚನೆ ಹಾಗೂ ಮಗು ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜೂನ್ 19ರಂದು ಮಧ್ಯಸ್ಥಿಕೆ ಕೇಂದ್ರದಲ್ಲಿ ರಾಜಿ ಸಂಧಾನ ಪ್ರಕ್ರಿಯೆ ನಡೆಯಲಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಂಡಿ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣವು ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಯುವಕ ಮತ್ತು ಯುವತಿ ಇಬ್ಬರ ಜೀವನವೂ ಸುಖಕರವಾಗಿರಬೇಕು ಎಂಬುದು ತಮ್ಮ ಆಶಯವಾಗಿದ್ದು, ಹಣಕ್ಕಿಂತ ಜೀವನದ ಮೌಲ್ಯವೇ ಮುಖ್ಯ ಎಂದು ಅವರು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು ಜೂನ್ 10ರಂದು ವಿಚಾರಣೆ ನಡೆಸಿ, ಪರಸ್ಪರ ಸಂಧಾನದ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸೂಚಿಸಿತ್ತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದ ಮುಂದೆ ಆರೋಪಿ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರು ರಾಜಿ ಸಂಧಾನದ ಪ್ರಸ್ತಾಪ ಮಂಡಿಸಿದ್ದರು.
ಇದನ್ನು ಪರಿಗಣಿಸಿದ ಹೈಕೋರ್ಟ್, ಸಂತ್ರಸ್ತೆ, ಆರೋಪಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರರು ಜೂನ್ 19ರಂದು ಕಡ್ಡಾಯವಾಗಿ ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿದೆ.
ಇನ್ನೊಂದೆಡೆ, ನ್ಯಾಯಾಲಯದ ಹಿಂದಿನ ಆದೇಶದಂತೆ ಮೊದಲ ತಿಂಗಳ ಪಾಲಿನ ₹75 ಸಾವಿರವನ್ನು ಆರೋಪಿ ಕೋರ್ಟ್‌ಗೆ ಠೇವಣಿ ಇಟ್ಟಿದ್ದು, ಆ ಮೊತ್ತವನ್ನು ತಕ್ಷಣವೇ ಸಂತ್ರಸ್ತೆಗೆ ಪಾವತಿಸುವಂತೆ ಹೈಕೋರ್ಟ್ ಸೂಚಿಸಿದೆ. ಜೊತೆಗೆ, ಎರಡನೇ ತಿಂಗಳ ₹75 ಸಾವಿರ ಮೊತ್ತವನ್ನು ನಾಲ್ಕು ದಿನಗಳೊಳಗೆ ಪಾವತಿಸುವಂತೆ ಆರೋಪಿಗೆ ನಿರ್ದೇಶಿಸಲಾಗಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 30ಕ್ಕೆ ನಿಗದಿಪಡಿಸಿರುವ ಹೈಕೋರ್ಟ್, ಮಧ್ಯಸ್ಥಿಕೆ ಕೇಂದ್ರದಲ್ಲಿ ನಡೆಯುವ ಸಂಧಾನದ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ.
ಮತ್ತಷ್ಟು ಓದಿ :
ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ಯತ್ನ ಆರೋಪ; ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲು
11 ಕೋಟಿ ರೂ. ಹೈಡ್ರೋಪೋನಿಕ್ಸ್ ಗಾಂಜಾ ಜಪ್ತಿ: ‘ಮಿಸೆಸ್ ಕೇರಳ’ ಮಾಜಿ ಸ್ಪರ್ಧಿ ಬಂಧನ















