ಈ ಹಿಂದೆ ನಡೆದ ಮಚ್ಚಿನ ಬಳ್ಳಮಂಜ ಪಣಕಜೆ ಅಪಘಾತದಲ್ಲಿ ಮೃತಪಟ್ಟ ಡಾಕಯ್ಯ ಗೌಡ ಹಾಗೂ ಚಂದಪ್ಪ ಮೂಲ್ಯ ಅವರ ಸಾವಿಗೆ ಸರಿಯಾದ ಸಮಯದಲ್ಲಿ ನೆರವು ಸಿಗದೆ ಇರುವುದೇ ಒಂದು ಕಾರಣ ಎಂಬುದು ಸಂಬಂಧಿಕರ ವಲಯದಿಂದ ಕೇಳಿಬಂದಿದೆ.
ಇನ್ನಷ್ಟು ತಿಳಿಯಲು : ಮಡಂತ್ಯಾರು ಸಮೀಪ ಭೀಕರ ರಸ್ತೆ ಅಪಘಾತ : ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸೇರಿ ಇಬ್ಬರ ದುರ್ಮರಣ
ಅಪಘಾತದ ನಂತರ ಡಾಕಯ್ಯ ಗೌಡ ಅವರನ್ನು ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಆದರೆ ಚಂದಪ್ಪ ಮೂಲ್ಯ ಅವರ ಕಾಲಿನ ಎಲುಬು ಮುರಿದು ತೀವ್ರ ರಕ್ತಸ್ರಾವವಾಗಿತ್ತು ನಂತರ ಚಂದಪ್ಪ ಮೂಲ್ಯ ಅವರ ಮಗ ಸ್ಥಳಕ್ಕೆ ಬಂದ ಬಳಿಕ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಸಮರ್ಪಕ ಸಮಯದಲ್ಲಿ ಸಾರ್ವಜನಿಕರಿಂದ ಸಹಾಯ ಸಿಗದಿರುವುದರಿಂದ ಅಸ್ಪತ್ರೆಗೆ ಕರೆದೊಯ್ಯುವಾಗ ತಡವಾಗಿದೆ ಎಂದು ಮೃತರ ಆಪ್ತರು ಹೇಳಿದ್ದಾರೆ.
ಒಂದು ಜೀವ ಉಳಿಸಲು ಕೆಲವೇ ನಿಮಿಷಗಳ ತ್ವರಿತ ಸ್ಪಂದನೆ ಸಾಕಾಗುವ ಸಂದರ್ಭಗಳಿವೆ. ಆದರೆ ಮಚ್ಚಿನ ಬಳ್ಳಮಂಜ–ಪಣಕಜೆ ಅಪಘಾತದಲ್ಲಿ ಆ ಅಮೂಲ್ಯ ಸಮಯ ವ್ಯರ್ಥವಾಗಿತ್ತೇ ಎಂಬ ನೋವಿನ ಪ್ರಶ್ನೆ ಇದೀಗ ಮೃತರ ಕುಟುಂಬಸ್ಥರನ್ನು ಕಾಡುತ್ತಿದೆ. ಸಕಾಲದಲ್ಲಿ ನೆರವು ಸಿಕ್ಕಿದ್ದರೆ ಇಬ್ಬರೂ ಇಂದು ಬದುಕಿರಬಹುದಿತ್ತೇ ಎಂಬ ಪ್ರಶ್ನೆಗೆ ಉತ್ತರ ಸಿಗದಿದ್ದರೂ, ಈ ಘಟನೆ ಸಮಾಜದ ಮಾನವೀಯತೆ ಮತ್ತು ತುರ್ತು ಸ್ಪಂದನಾ ವ್ಯವಸ್ಥೆಯ ಕುರಿತು ಗಂಭೀರ ಚಿಂತನೆಗೆ ಕಾರಣವಾಗಿದೆ.









