ಉಡುಪಿ, ಆ. 7: ಉಡುಪಿ ಜಿಲ್ಲೆಯಲ್ಲಿ ಮತ್ತೊಮ್ಮೆ ಗುಂಡಿನ ದಾಳಿ ನಡೆದಿದ್ದು, ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇತ್ತೀಚೆಗೆ ಕುಂದಾಪುರದಲ್ಲಿ ನಡೆದ ಶೂಟೌಟ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಗುಂಡಿನ ದಾಳಿ ನಡೆದಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ಮೇಲೆ ಗುಂಡಿನ ದಾಳಿ
ಮೃತ ಡೇವಿಡ್ ಡಿಸೋಜಾ ಮುದರಂಗಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದು, ಸ್ಥಳೀಯ ಕಾಂಗ್ರೆಸ್ನ ಸಕ್ರಿಯ ಮುಖಂಡರಾಗಿದ್ದರು. ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹತ್ಯೆಯ ಹಿಂದಿನ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ವೈಯಕ್ತಿಕ ದ್ವೇಷ, ವ್ಯವಹಾರಿಕ ವೈಷಮ್ಯ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇತ್ತೀಚಿನ ಶೂಟೌಟ್ ಬಳಿಕ ಮತ್ತೆ ಆತಂಕ
ಕೆಲವೇ ದಿನಗಳ ಹಿಂದೆ ಕುಂದಾಪುರದಲ್ಲಿ ಉದ್ಯಮಿ ಐವನ್ ರೀಚರ್ಡ್ ಮಸ್ಕರೇನಸ್ ಅವರನ್ನು ಹಣಕಾಸಿನ ವಿವಾದದ ಹಿನ್ನೆಲೆ ನಾಡಪಿಸ್ತೂಲಿನಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆ ಪ್ರಕರಣದ ತನಿಖೆ ಇನ್ನೂ ಮುಂದುವರಿಯುತ್ತಿರುವ ಸಂದರ್ಭದಲ್ಲೇ ಉಡುಪಿಯಲ್ಲಿ ಮತ್ತೊಂದು ಶೂಟೌಟ್ ನಡೆದಿರುವುದು ಸಾರ್ವಜನಿಕರಲ್ಲಿ ಭದ್ರತೆ ಕುರಿತ ಆತಂಕವನ್ನು ಹೆಚ್ಚಿಸಿದೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ವಿವಿಧ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಮತ್ತಷ್ಟು ಓದಿ :
ಓಲ್ಡ್ ಮಾಂಕ್ ಸೇರಿದಂತೆ ಕೆಲವು ಮದ್ಯ ಬ್ರ್ಯಾಂಡ್ಗಳಿಗೆ ನಿಯಮ ಉಲ್ಲಂಘನೆ ಆರೋಪ











1 thought on “ಉಡುಪಿಯಲ್ಲಿ ಮತ್ತೆ ಗುಂಡಿನ ದಾಳಿ; ಕಾಂಗ್ರೆಸ್ ಮುಖಂಡ, ಉದ್ಯಮಿ ಡೇವಿಡ್ ಡಿಸೋಜಾ ಹತ್ಯೆ”