ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ (SIR) ಹೆಸರಿನಲ್ಲಿ ಸೈಬರ್ ವಂಚಕರು ವ್ಯಕ್ತಿಯೊಬ್ಬರಿಂದ ₹3,49,999 ಹಣ ಕಸಿದುಕೊಂಡಿರುವ ಘಟನೆ ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚುನಾವಣಾ ಆಯೋಗದ (ECI) ಅಧಿಕಾರಿಯಂತೆ ಕರೆ ಮಾಡಿ ನಕಲಿ ಲಿಂಕ್ ಕಳುಹಿಸಿ ಈ ವಂಚನೆ ನಡೆಸಲಾಗಿದೆ.
ECI ಅಧಿಕಾರಿ ಎಂದು ಕರೆ… ಬಳಿಕ ಲಕ್ಷಾಂತರ ರೂ. ವಂಚನೆ
ಪಾರ್ಥಸಾರಥಿ ಎಂಬವರಿಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ಕರೆ ಮಾಡಿ, ತಾನು ಚುನಾವಣಾ ಆಯೋಗದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಈಗಾಗಲೇ ಸಲ್ಲಿಸಿದ್ದ SIR (Special Intensive Revision) ಅರ್ಜಿ ತಿರಸ್ಕೃತವಾಗಿದ್ದು, ಹೊಸದಾಗಿ ಅರ್ಜಿ ಸಲ್ಲಿಸಬೇಕೆಂದು ಹೇಳಿ ನಕಲಿ ಲಿಂಕ್ ಕಳುಹಿಸಿದ್ದಾನೆ.
ಅದರಲ್ಲಿದ್ದ ಸೂಚನೆಯಂತೆ ಪಾರ್ಥಸಾರಥಿ ತಮ್ಮ ಹೆಸರು, ವಿಳಾಸ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ನಮೂದಿಸಿದ್ದಾರೆ. ಬಳಿಕ ಅರ್ಜಿ ಸ್ವೀಕಾರಕ್ಕಾಗಿ ₹5 ಪಾವತಿಸುವಂತೆ ಹೇಳಲಾಗಿದೆ. ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ವಿಫಲವಾದ ಹಿನ್ನೆಲೆಯಲ್ಲಿ ಖದೀಮ ಕ್ಯೂಆರ್ ಕೋಡ್ ಕಳುಹಿಸಿದ್ದು, ಅದನ್ನು ಬಳಸಿದ ಕೆಲವೇ ಕ್ಷಣಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹3,49,999 ಹಣ ಕಡಿತವಾಗಿದೆ.
ಮೋಸ ನಡೆದಿರುವುದು ತಿಳಿದ ಬಳಿಕ ಅವರು ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸೈಬರ್ ಪೊಲೀಸರ ಎಚ್ಚರಿಕೆ: ಚುನಾವಣಾ ಆಯೋಗ ಹಣ ಕೇಳುವುದಿಲ್ಲ
ಈ ಪ್ರಕರಣದ ಹಿನ್ನೆಲೆಯಲ್ಲಿ ಸೈಬರ್ ಪೊಲೀಸರು ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿ, BLO ಅಥವಾ ಮತದಾರರ ಪಟ್ಟಿ ಪರಿಶೀಲನಾ ಸಿಬ್ಬಂದಿ ಎಂದು ಹೇಳಿಕೊಂಡು ಕರೆ ಮಾಡಿ ವೈಯಕ್ತಿಕ ಮಾಹಿತಿ, OTP, ಬ್ಯಾಂಕ್ ವಿವರ ಅಥವಾ ಹಣ ಕೇಳುವವರ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಿದ್ದಾರೆ.
ಅಧಿಕಾರಿಗಳು ಸ್ಪಷ್ಟಪಡಿಸಿರುವಂತೆ:
- SIR ಪರಿಶೀಲನೆಗೆ ಚುನಾವಣಾ ಆಯೋಗ ಯಾವುದೇ ಶುಲ್ಕ ವಸೂಲಿ ಮಾಡುವುದಿಲ್ಲ.
- ವಾಟ್ಸಾಪ್ ಮೂಲಕ APK ಫೈಲ್ ಅಥವಾ ಅಪ್ಲಿಕೇಶನ್ ಕಳುಹಿಸುವುದಿಲ್ಲ.
- ಮತದಾರರ ಪರಿಶೀಲನೆ ಪ್ರಕ್ರಿಯೆ ವಾಟ್ಸಾಪ್ ಮೂಲಕ ನಡೆಯುವುದಿಲ್ಲ.
ಮೋಸದಿಂದ ತಪ್ಪಿಸಿಕೊಳ್ಳಲು ಈ ಮುನ್ನೆಚ್ಚರಿಕೆ ಪಾಲಿಸಿ
ಅಪರಿಚಿತರು ಕಳುಹಿಸುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಪರಿಚಯವಿಲ್ಲದ APK ಅಥವಾ ಮೊಬೈಲ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. OTP, ಬ್ಯಾಂಕ್ ಖಾತೆ ವಿವರ, ಕಾರ್ಡ್ ಮಾಹಿತಿ ಅಥವಾ ವೈಯಕ್ತಿಕ ದಾಖಲೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಯಾವುದೇ ಅನುಮಾನಾಸ್ಪದ ಕರೆ ಅಥವಾ ಸಂದೇಶ ಬಂದರೆ ತಕ್ಷಣ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಮೂಲಕ ದೂರು ದಾಖಲಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.
ಮತ್ತಷ್ಟು ಓದಿ :











1 thought on “ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ₹3.49 ಲಕ್ಷ ಸೈಬರ್ ವಂಚನೆ! ECI ಅಧಿಕಾರಿ ಎಂದು ನಂಬಿಸಿ ಖದೀಮರ ಕೈಚಳಕ”