ಕಡಬ ಸಮೀಪದ ಕಜೆ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ; ತನಿಖೆ ಆರಂಭಿಸಿದ ಪೊಲೀಸರು
ಕಡಬ, ಜೂನ್ 20 : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕಾರು ಸಮೀಪದ ಕಜೆ ಪ್ರದೇಶದಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಬಾಡಿಗೆ ಮನೆಯಲ್ಲಿ ದಂಪತಿಯ ಮೃತದೇಹಗಳು ಪತ್ತೆಯಾಗಿದ್ದು, ಅವರ ಎರಡು ವರ್ಷದ ಪುತ್ರಿ ಮಾತ್ರ ಜೀವಂತವಾಗಿ ಪತ್ತೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ವಿಷಾದದ ಛಾಯೆ ಮೂಡಿಸಿದೆ.
ಮೃತರನ್ನು ಬಜಗೋಳಿಯ ದಿನೇಶ್ ಹಾಗೂ ಸಿದ್ಧಕಟ್ಟೆಯ ಸಂಗೀತಾ ಎಂದು ಗುರುತಿಸಲಾಗಿದೆ. ದಂಪತಿ ಆಲಂಕಾರಿನಲ್ಲಿ ಹೋಟೆಲ್ ನಡೆಸುತ್ತಿದ್ದು, ಸುಮಾರು ಒಂದು ತಿಂಗಳ ಹಿಂದೆ ವ್ಯವಹಾರ ಸ್ಥಗಿತಗೊಳಿಸಿದ್ದರೆಂದು ತಿಳಿದುಬಂದಿದೆ. ಬಳಿಕ ಅವರು ಬೇರೆಡೆಗೆ ತೆರಳಿದ್ದು, ಕಳೆದ ಗುರುವಾರ ಸಂಜೆ ಮತ್ತೆ ಆಲಂಕಾರಿಗೆ ಮರಳಿದ್ದರು ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿಯ ಆಧಾರದಲ್ಲಿ ಪತಿ ದಿನೇಶ್ ಅವರು ಪತ್ನಿ ಸಂಗೀತಾ ಅವರನ್ನು ಕೊಲೆಗೈದು ಬಳಿಕ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಘಟನೆಯ ಅತ್ಯಂತ ಮನಕಲಕುವ ಅಂಶವೆಂದರೆ, ದಂಪತಿಯ ಎರಡು ವರ್ಷದ ಪುತ್ರಿ ಧ್ರುವಿ ಮನೆಯೊಳಗೆ ಜೀವಂತವಾಗಿ ಪತ್ತೆಯಾಗಿರುವುದು. ಅಳುತ್ತಾ ಸುಸ್ತಾಗಿ ನಿದ್ರೆಗೆ ಜಾರಿದ್ದ ಮಗುವನ್ನು ಸ್ಥಳೀಯರು ಕಂಡು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
ಮನೆ ಒಳಗಿನಿಂದಲೇ ಬೀಗ ಹಾಕಲಾಗಿದ್ದ ಕಾರಣ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಾಹಿತಿ ಪಡೆದ ತಕ್ಷಣ ಕಡಬ ಪೊಲೀಸ್ ಠಾಣೆಯ ಉಪನಿರೀಕ್ಷಕ ಜಂಬುರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಘಟನೆಯ ನಿಖರ ಕಾರಣ ಇನ್ನಷ್ಟೇ ಬೆಳಕಿಗೆ ಬರಬೇಕಿದ್ದು, ಪೊಲೀಸ್ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ಈ ದುರ್ಘಟನೆ ಆಲಂಕಾರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಮತ್ತಷ್ಟು ಓದಿ :
ಉಪ್ಪಿನಂಗಡಿಯಲ್ಲಿ ಜಾನುವಾರು ಸಾಗಾಟದ ಮೇಲೆ ಪೊಲೀಸ್ ದಾಳಿ
ಶಾಲೆ ಕಾಲೇಜು ಆರಂಭ : ಗ್ರಾಮೀಣ ವಿದ್ಯಾರ್ಥಿಗಳಿಗೆ ಬಸ್ ಕೊರತೆ ತಲೆನೋವು










1 thought on “ಆಲಂಕಾರಿನಲ್ಲಿ ನಿಗೂಢ ದುರಂತ : ಬಾಡಿಗೆ ಮನೆಯಲ್ಲಿ ದಂಪತಿ ಶವವಾಗಿ ಪತ್ತೆ, ಅಳುತ್ತಲೇ ನಿದ್ರೆಗೆ ಜಾರಿದ್ದ ಎರಡು ವರ್ಷದ ಮಗು”