ಉಪ್ಪಿನಂಗಡಿ : ವಾಹನ ತಪಾಸಣೆ ವೇಳೆ ದಾಖಲೆಗಳಿಲ್ಲದೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು, ಇಬ್ಬರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ಜೂನ್ 17ರಂದು ಬೆಳಿಗ್ಗೆ ಉಪ್ಪಿನಂಗಡಿ ಸಮೀಪದ ಅಟ್ರಿಬೈಲು ಪ್ರದೇಶದಲ್ಲಿ ಪೊಲೀಸ್ ಉಪನಿರೀಕ್ಷಕ ಸುಶೀಲ್ ಕೆ.ಪಿ. ನೇತೃತ್ವದಲ್ಲಿ ವಾಹನ ತಪಾಸಣೆ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಕೆಎ-14-ಎ-7511 ಸಂಖ್ಯೆಯ ಐಚರ್ ಲಾರಿಯನ್ನು ತಡೆದು ಪರಿಶೀಲಿಸಿದಾಗ, ಅದರೊಳಗೆ 16 ಜಾನುವಾರುಗಳನ್ನು ಸಾಗಿಸಲಾಗುತ್ತಿರುವುದು ಪತ್ತೆಯಾಯಿತು.
ಲಾರಿಯಲ್ಲಿದ್ದ ಕಾಸರಗೋಡು ಮೂಲದ ಪರ್ಧಿನ್ ಖಾನ್ (24) ಹಾಗೂ ಹಾಸನ ಜಿಲ್ಲೆಯ ಹೊಳೆನರಸೀಪುರ ನಿವಾಸಿ ಜಾವೀದ್ ಪಾಷಾ (34) ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. ತನಿಖೆಯ ವೇಳೆ ಜಾನುವಾರು ಸಾಗಾಟಕ್ಕೆ ಅಗತ್ಯವಿರುವ ಯಾವುದೇ ಅಧಿಕೃತ ದಾಖಲೆಗಳು ಅಥವಾ ಅನುಮತಿ ಪತ್ರಗಳು ಅವರ ಬಳಿ ಇಲ್ಲ ಎಂಬುದು ಬೆಳಕಿಗೆ ಬಂದಿದೆ.
ಇದರಿಂದಾಗಿ ಪೊಲೀಸರು ಲಾರಿ ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 91/2026 ಸಂಖ್ಯೆಯ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ವಿವಿಧ ಕಲಂಗಳು, ಪ್ರಾಣಿ ಹಿಂಸಾ ತಡೆ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ವಿಧಿಗಳಡಿ ಕ್ರಮ ಜರುಗಿಸಲಾಗಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಜಾನುವಾರುಗಳ ಸಾಗಾಟದ ಉದ್ದೇಶ ಮತ್ತು ಹಿನ್ನೆಲೆ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮತ್ತಷ್ಟು ಓದಿ :
ಆನ್ಲೈನ್ ಉದ್ಯೋಗದ ಹೆಸರಿನಲ್ಲಿ ಮೋಸ : ವ್ಯಕ್ತಿಯಿಂದ ₹3.51 ಲಕ್ಷ ದೋಚಿದ ವಂಚಕರು
ಮಂಗಳೂರು : ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಐವರು ಪೊಲೀಸರ ವಶಕ್ಕೆ
ವಿಟ್ಲದಲ್ಲಿ ದುರಂತ: ಲಾರಿ ದುರಸ್ತಿ ವೇಳೆ ಚಕ್ರದಡಿ ಸಿಲುಕಿ ಚಾಲಕ ಮೃತ್ಯು










1 thought on “ಉಪ್ಪಿನಂಗಡಿಯಲ್ಲಿ ಜಾನುವಾರು ಸಾಗಾಟದ ಮೇಲೆ ಪೊಲೀಸ್ ದಾಳಿ”