ನೆಲಮಂಗಲ: ಆನ್ಲೈನ್ ಗೇಮಿಂಗ್ನಲ್ಲಿ ಹಣ ಕಳೆದುಕೊಂಡು ಸಾಲದ ಒತ್ತಡಕ್ಕೆ ಸಿಲುಕಿದ್ದ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ರಂಜಿತಾ (28) ಎಂದು ಗುರುತಿಸಲಾಗಿದೆ. ಅವರು ನೆಲಮಂಗಲದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಗೇಮಿಂಗ್ನಲ್ಲಿ ಹಣ ಕಳೆದುಕೊಂಡಿದ್ದ ಮಹಿಳೆ
ಮೂಲತಃ ಕಲಬುರಗಿ ನಿವಾಸಿಗಳಾದ ರಂಜಿತಾ ಮತ್ತು ಅರುಣ್ ದಂಪತಿ ಸುಮಾರು ಐದು ವರ್ಷಗಳಿಂದ ನೆಲಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸುಮಾರು ಹತ್ತು ವರ್ಷಗಳ ಹಿಂದೆ ಇವರ ವಿವಾಹವಾಗಿದ್ದು, ದಂಪತಿಗೆ ಏಳು ವರ್ಷದ ಮಗನಿದ್ದಾನೆ.
ಕಳೆದ ಒಂದು ವರ್ಷದಿಂದ ರಂಜಿತಾ ಆನ್ಲೈನ್ ಗೇಮಿಂಗ್ನಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದ್ದು, ಈ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದರು. ಸಾಲದ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಅವರ ತಾಯಿ ಹಾಗೂ ಪತಿ ಸೇರಿ ಈಗಾಗಲೇ ಸುಮಾರು ₹15 ಲಕ್ಷ ಸಾಲವನ್ನು ತೀರಿಸಿದ್ದರು ಎಂದು ತಿಳಿದುಬಂದಿದೆ.
ಆದರೂ ಗೇಮಿಂಗ್ ಚಟ ಮುಂದುವರಿದಿದ್ದು, ಮತ್ತೆ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದರಿಂದಾಗಿ ಅವರು ತೀವ್ರ ಆರ್ಥಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿದೆ.
ಪತಿ ಊರಿಗೆ ತೆರಳಿದ್ದ ವೇಳೆ ದುರಂತ
ಕೆಲಸದ ನಿಮಿತ್ತ ರಂಜಿತಾ ಅವರ ಪತಿ ಅರುಣ್ ಎರಡು ದಿನಗಳ ಹಿಂದೆ ಕಲಬುರಗಿಗೆ ತೆರಳಿದ್ದರು. ಮನೆಯಲ್ಲಿ ಏಳು ವರ್ಷದ ಮಗನೊಂದಿಗೆ ಇದ್ದ ರಂಜಿತಾ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆಲಮಂಗಲ ಸರ್ಕಾರಿ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ್ಮಹತ್ಯೆಗೆ ಕಾರಣವಾದ ಪರಿಸ್ಥಿತಿಗಳು ಹಾಗೂ ಆನ್ಲೈನ್ ಗೇಮಿಂಗ್ ಮತ್ತು ಸಾಲದ ವಿಚಾರದಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸಿ ತನಿಖೆ ಮುಂದುವರಿಸಿದ್ದಾರೆ.
ಮತ್ತಷ್ಟು ಓದಿ :
ರಾಜ್ಯಾದ್ಯಂತ ಗುಟ್ಕಾ, ಪಾನ್ ಮಸಾಲಾ ವಿರುದ್ಧ ಕಠಿಣ ಕ್ರಮ: ತಂಬಾಕು-ನಿಕೋಟಿನ್ ಉತ್ಪನ್ನಗಳಿಗೆ ಒಂದು ವರ್ಷ ನಿಷೇಧ











1 thought on “ಆನ್ಲೈನ್ ಗೇಮಿಂಗ್ನಿಂದ ಸಾಲದ ಸುಳಿಗೆ; ಹಣ ಕಳೆದುಕೊಂಡ ಗೃಹಿಣಿ ಆತ್ಮಹತ್ಯೆ”